ಇಸ್ಲಾಮಾಬಾದ್, ಮಂಗಳವಾರ, 7 ಸೆಪ್ಟೆಂಬರ್ 2010( 20:11 IST )
ಬಡತನ, ಕಟ್ಟರ್ ಇಸ್ಲಾಮಿಕ್ ವಾದ, ಇದಕ್ಕೆ ಪುಷ್ಠಿ ನೀಡುವ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು, ಮತಾಂಧತೆ, ಭಯೋತ್ಪಾದನೆ, ಸರಣಿ ಬಾಂಬ್ ಸ್ಫೋಟಗಳು, ಅಶಾಂತಿ, ಅರಾಜಕತೆ ಹೀಗೆ ಹತ್ತು ಹಲವು ಗಂಭೀರ ಸಮಸ್ಯೆಗಳಿಂದ ಬಳಸುತ್ತಿರುವ ಪಾಕಿಸ್ತಾನದಂತಹ ಪಾಕಿಸ್ತಾನದಲ್ಲಿ ಯುವಕರು ಇಸ್ಲಾಂ ಧರ್ಮವನ್ನು ತೊರೆಯುತ್ತಿರುವ ಅಂಶಗಳು ಬೆಳಕಿಗೆ ಬಂದಿದೆ.
ಧಾರ್ಮಿಕ ನಂಬಿಕೆಯನ್ನು ಪ್ರಶ್ನಿಸುತ್ತಾ, ನಾಸ್ತಿಕವಾದಕ್ಕೆ ಶರಣಾಗುತ್ತಿರುವ ಮುಸ್ಲಿಮರ ಸಂಖ್ಯೆ ಹೆಚ್ಚಲ್ಲದಿದ್ದರೂ, ಇಸ್ಲಾಮಿಕ್ ತೀವ್ರವಾದವು ಅವರ ಮೇಲೆ ಪರಿಣಾಮ ಬೀರಿರುವುದು ಈ ಮೂಲಕ ಬಹಿರಂಗವಾಗುತ್ತಿದೆ.
ಸಾಮಾಜಿಕ ಸಂಪರ್ಕತಾಣ 'ಫೇಸ್‌ಬುಕ್'ನಲ್ಲಿ ಪಾಕಿಸ್ತಾನದ ನಾಸ್ತಿಕವಾದಿಗಳಿಗೆಂದೇ ಖಾತೆಯೊಂದನ್ನು ತೆರೆಯಲಾಗಿದೆ. ಇದರ ಕರ್ತೃ ಪಾಕಿಸ್ತಾನದ ಹಜ್ರತ್ ನಾಖುದಾ ಎಂಬ ಮಾಜಿ ಮುಸ್ಲಿಂ.
ಇತ್ತೀಚಿನ ವರದಿಗಳ ಪ್ರಕಾರ ಮುಸ್ಲಿಂ ನಾಸ್ತಿಕರ ಈ ಖಾತೆಯಲ್ಲಿ 100ಕ್ಕೂ ಹೆಚ್ಚು ಸದಸ್ಯರಿದ್ದಾರೆ. 'ನೀವು ಹೇಗೆ ನಾಸ್ತಿಕರಾದಿರಿ?' ಎಂಬ ಕುರಿತು ಚರ್ಚೆ ನಡೆಸಲು ಇದು ವೇದಿಕೆಯನ್ನೂ ಕಲ್ಪಿಸಿದೆ.
ಫೇಸ್‌ಬುಕ್ ಖಾತೆಯಲ್ಲಿ ನಾಸ್ತಿಕರ ಸಮೂಹವನ್ನು ಸೃಷ್ಟಿಸಲು ಕಾರಣರಾದ ಹಜ್ರತ್ ತನ್ನ ಕಥೆಯನ್ನೂ ವಿವರಿಸಿದ್ದಾರೆ.
'ನಾನು ಓರ್ವ ಸಂಪ್ರದಾಯವಾದಿ ಮುಸ್ಲಿಮನಾಗಿದ್ದೆ. ಜೀವನ ಸಾಗಿಸುತ್ತಿದ್ದುದು ಸೌದಿ ಅರೇಬಿಯಾದಲ್ಲಿ. ಎರಡು ಬಾರಿ ಹಜ್‌ಗೆ ಹೋಗಿರುವ ನಾನು ಲೆಕ್ಕವಿಲ್ಲದಷ್ಟು ಉಮ್ರಾ ನಿರ್ವಹಿಸಿದ್ದೇನೆ. ದಿನಕ್ಕೆ ಐದು ಬಾರಿ ನಮಾಜು ಮಾಡುತ್ತಿದ್ದ ಮುಸ್ಲಿಂ ನಾನು'
'ಆದರೆ ನನಗೆ 17-18 ವಯಸ್ಸಾಗುತ್ತಿದ್ದಂತೆ ವಾಸ್ತವತೆಯು ನನ್ನನ್ನು ಬಡಿದೆಬ್ಬಿಸಿತು. ನನ್ನ ಹೆತ್ತವರು ಮುಸ್ಲಿಮರಾಗಿರುವ ಏಕೈಕ ಕಾರಣಕ್ಕೆ ನಾನು ಕೂಡ ಮುಸ್ಲಿಮನಾಗಿದ್ದೇನೆ ಎಂಬುದು ನನಗೆ ಬಾಧಿಸಲಾರಂಭಿಸಿತು'
ಹೀಗೆಂದು ಹೇಳಿರುವ ಹಜ್ರತ್ ಓರ್ವ ಯುವ ಕಂಪ್ಯೂಟರ್ ತಜ್ಞ. ಮೂಲತಃ ಲಾಹೋರಿನವರು.
ಈ ಸಮೂಹದ ಮತ್ತೊಬ್ಬ ಸದ್ಸಯ ಅಹ್ಮದ್ ಜೈದಿಯವರ ಮಾತುಗಳನ್ನೇ ಕೇಳಿ. ತನಗೆ ದೇವರ ಅಸ್ತಿತ್ವದ ಕುರಿತು ಯಾವುದೇ ಪುರಾವೆ ಅಥವಾ ಒಂಚೂರೂ ಸಾಕ್ಷಿಗಳು ಲಭಿಸದೇ ಇರುವುದರಿಂದ ನಾನು ನಿರೀಶ್ವರವಾದಿಯಾದೆ ಎಂದು ಚರ್ಚಾ ವೇದಿಕೆಯಲ್ಲಿ ಬರೆದಿದ್ದಾರೆ.
ಇಸ್ಲಾಮಿಕ್ ವಿವಾದಿತ ಭಾರತೀಯ ಪ್ರವಚನಕಾರ ಝಾಕೀರ್ ನಾಯಕ್‌ನನ್ನು ಅತಿಯಾಗಿ ಇಷ್ಟಪಡುತ್ತಾ, ಲೇಖಕ ಸಲ್ಮಾನ್ ರಶ್ದಿಯನ್ನು ದ್ವೇಷಿಸುತ್ತಿದ್ದ ಆಲಿ ರಾಣಾ ಈಗ ಸಂಪೂರ್ಣವಾಗಿ ವಿರುದ್ಧ ದಿಕ್ಕಿಗೆ ತಿರುಗಿದ್ದಾರೆ. ಪ್ರತಿಯೊಂದು ಮಗುವೂ ಹುಟ್ಟುವಾಗ ಪರಿಶುದ್ಧವಾಗಿರುತ್ತದೆ, ನಂತರದ ಪರಿಸರವೇ ಮಗುವನ್ನು ಬದಲಾಯಿಸುತ್ತದೆ ಎಂಬ ನಿರ್ಧಾರಕ್ಕೆ ಅವರು ಬಂದಿದ್ದಾರೆ.
ಈಗ ಅವರ ಪ್ರಕಾರ ಝಾಕೀರ್ ನಾಯಕ್ ಓರ್ವ ಮೂರ್ಖ, ರಶ್ಧಿ ಓರ್ವ ಅಸಾಧಾರಣ ವ್ಯಕ್ತಿ.
ಅದೇ ಹೊತ್ತಿಗೆ ಧರ್ಮಾತೀತ ಪಂಗಡಕ್ಕೆ ದಾಖಲೆಗಳಲ್ಲಿ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂಬ ಗಂಭೀರ ವಿಚಾರಗಳೂ ಇಲ್ಲಿ ಚರ್ಚೆಯಾಗುತ್ತಿವೆ. ತಾವು ಪಾಸ್‌ಪೋರ್ಟ್ ಅಥವಾ ಇನ್ನಿತರ ದಾಖಲೆಗಳಲ್ಲಿ ಧರ್ಮವನ್ನು ನಮೂದಿಸುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸುತ್ತಿದ್ದಾರೆ.
ಕಳೆದ ಬಾರಿ ನಾನು ಪಾಸ್‌ಪೋರ್ಟ್ ನವೀಕರಿಸಲೆಂದು ಹೋಗಿದ್ದೆ. 'ಧರ್ಮಾತೀತ' ಎಂಬ ಆಯ್ಕೆಗೆ ಅಲ್ಲಿ ಅವಕಾಶವೇ ಇಲ್ಲದಿರುವುದು ನನ್ನ ಗಮನಕ್ಕೆ ಬಂತು. ಮುಂದಿನ ಬಾರಿ ನಾನು ಪಾಸ್‌ಪೋರ್ಟ್‌ಗಾಗಿ ಹೋದಾಗ, ನನ್ನ ಧರ್ಮ ಇಸ್ಲಾಂ ಎಂದು ಬರೆಯಲು ನಾನು ಇಚ್ಛಿಸುವುದಿಲ್ಲ ಎಂದು ಓರ್ವ ಸದಸ್ಯ ಹೇಳಿಕೊಂಡಿದ್ದಾನೆ.