ತೆರೈನ ನಾಲ್ಕು ಪಕ್ಷಗಳು ಮೈತ್ರಿಯನ್ನು ತೀವ್ರವಾಗಿ ವಿರೋಧಿಸಿದ ಪರಿಣಾಮ ನೇಪಾಳ ನೂತನ ಪ್ರಧಾನಿ ಆಯ್ಕೆಗಾಗಿ ಮಂಗಳವಾರ ನಡೆದ 7ನೇ ಸುತ್ತಿನ ಚುನಾವಣೆಯಲ್ಲಿಯೂ ಮಾವೋ ಪಕ್ಷದ ವರಿಷ್ಠ ಪುಷ್ಪ ಕಮಾಲ್ ದಹಾಲ್ ಅಲಿಯಾಸ್ ಪ್ರಚಂಡ ಪರಾಜಯಗೊಳ್ಳುವ ಮೂಲಕ ಸಂವಿಧಾನ ಬಿಕ್ಕಟ್ಟು ಮುಂದುವರಿದಂತಾಗಿದೆ.
ಈ ಮೊದಲು ನೂತನ ಪ್ರಧಾನಿ ಆಯ್ಕೆಗಾಗಿ ಆರು ಬಾರಿ ಚುನಾವಣೆ ನಡೆದ ಸಂದರ್ಭದಲ್ಲಿಯೂ ಪ್ರಚಂಡ ಹಾಗೂ ಪ್ರತಿಸ್ಪರ್ಧಿ ನೇಪಾಳಿ ಕಾಂಗ್ರೆಸ್ ಅಭ್ಯರ್ಥಿ ಪೌಡ್ಯಾಲ್ ಬಹುಮತ ಪಡೆಯಲು ವಿಫಲರಾಗಿದ್ದರು.
ಮಂಗಳವಾರ ನಡೆದ ಏಳನೇ ಬಾರಿಯ ಚುನಾವಣೆಯಲ್ಲಿ ಪ್ರಚಂಡ 599 ಸದಸ್ಯ ಬಲದ ಸಂಸದರಲ್ಲಿ 252 ಮತ ಪಡೆದಿದ್ದರೆ, ಪ್ರತಿಸ್ಪರ್ಧಿ ರಾಮ್ ಚಂದ್ರಾ ಪೌಡ್ಯಾಲ್ ಕೇವಲ 119 ಮತ ಗಳಿಸಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಬಹುಮತದ 300 ಮತ ಪಡೆಯುವಲ್ಲಿ ವಿಫಲರಾಗಿದ್ದರು.
ಏತನ್ಮಧ್ಯೆ ಅಚ್ಚರಿಕ ಬೆಳವಣಿಗೆ ಎಂಬಂತೆ ಇಂದು ಕಾಠ್ಮಂಡುವಿನಲ್ಲಿರುವ ಚೀನಾ ರಾಯಭಾರ ಕಚೇರಿ ಮುಂಭಾಗ ಸುಮಾರು 200 ಮಂದಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು. 'ಮುಕ್ತ ಟಿಬೆಟ್' ಸಂಘಟನೆಯ ವಿದ್ಯಾರ್ಥಿ ಗುಂಪು ಈ ಪ್ರತಿಭಟನೆ ನಡೆಸಿತ್ತು. ಅಲ್ಲದೇ ಈ ಗುಂಪು ಹಾಂಗ್‌ಕಾಂಗ್ ಮತ್ತು ಮಲೇಷ್ಯಾದಲ್ಲಿ 20 ಸಾವಿರ ಸದಸ್ಯರನ್ನು ಹೊಂದಿರುವುದಾಗಿ ಹೇಳಿದೆ.
ಪ್ರತಿಭಟನಾಕಾರರು ನೇಪಾಳದ ಆಂತರಿಕ ವ್ಯವಹಾರಗಳಲ್ಲಿ ಯಾವುದೇ ವಿದೇಶಗಳ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದು ಘೋಷಣೆ ಕೂಗಿದರು. ಅಲ್ಲದೇ ಕೆಲವು ಪ್ರತಿಭಟನಾಕಾರರು, ಮಾವೋವಾದಿ ಸಂಸದ ಕೃಷ್ಣ ಬಹಾದೂರ್ ಮಾಹ್ರಾ ಸಂಸದರನ್ನು ಖರೀದಿಸಲು ಚೀನಾದಿಂದ ಲಂಚ ಪಡೆದಿರುವ ಬಗ್ಗೆ ಭಿತ್ತಿಪತ್ರ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.