ಸದ್ಯದ ಸ್ಥಿತಿಯಲ್ಲಿ ಯುರೋಪ್ ಖಂಡದಲ್ಲಿ ಕ್ರಿಶ್ಚಿಯನ್ ಸಮುದಾಯದ ಪ್ರಾಬಲ್ಯವೇ ಇದೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಯುರೋಪ್‌ನಲ್ಲಿ ಇಸ್ಲಾಮ್ ಸಮುದಾಯವೇ ಮೇಲುಗೈ ಸಾಧಿಸಲಿದೆ ಎಂದು ಇಟಾಲಿಯನ್ ಪಾದ್ರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
'ಯುರೋಪ್‌ನಲ್ಲಿ ಜನನ ಪ್ರಮಾಣ ಕುಸಿಯುತ್ತಿದ್ದರೆ, ಮತ್ತೊಂದೆಡೆ ವಲಸಿಗರ ಮುಸ್ಲಿಮರ ಜನಸಂಖ್ಯೆ ಹೆಚ್ಚಳವಾಗುವ ಮೂಲಕ ಯುರೋಪ್‌ನಲ್ಲಿ ಇಸ್ಲಾಮ್ ಪ್ರಾಬಲ್ಯ ಸಾಧಿಸಲಿದೆ' ಎಂದು ಇಟೆಲಿಯ ಪಾದ್ರಿ ಪಿಯೆರೋ ಘೆಡ್ಡೋ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಕೆಂದು ಪಾದ್ರಿ ಘೆಡ್ಡೋ ತಿಳಿಸಿರುವುದಾಗಿ ಡೈಲಿ ಟೆಲಿಗ್ರಾಫ್ ವರದಿ ಹೇಳಿದೆ. ಜನಸಂಖ್ಯೆಯ ಬಗ್ಗೆ ಯುರೋಪ್‌ನ ಅಂಕಿ-ಅಂಶ ಸ್ಪಷ್ಟ ಮಾಹಿತಿಯನ್ನು ನೀಡುತ್ತದೆ. ವರ್ಷಂಪ್ರತಿ 120,000 ಅಥವಾ 130,000 ಇಟಾಲಿಯನ್‌ರು ಗರ್ಭಪಾತ ಮಾಡಿಸಿಕೊಳ್ಳುತ್ತಿದ್ದಾರೆ. ಇಲ್ಲವೇ ವಿವಾಹ ವಿಚ್ಚೇದನ ಪಡೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಇಟಲಿಗೆ ಪ್ರತಿವರ್ಷ 200,000ಕ್ಕೂ ಅಧಿಕ ಮುಸ್ಲಿಮರು ವಲಸೆ ಬರುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಮುಸ್ಲಿಮ್ ಜನಸಂಖ್ಯೆ ಹೆಚ್ಚಳವಾಗುತ್ತ, ಕ್ರಿಶ್ಚಿಯನ್ ಜನಸಂಖ್ಯೆ ಇಳಿಮುಖವಾಗುತ್ತಿರುವ ಕುರಿತು ಪತ್ರಿಕೆಗಳಾಗಲಿ, ಟಿವಿ ಚಾನೆಲ್‌ಗಳ ಯಾವುದೇ ಕಾರ್ಯಕ್ರಮವೂ ಆ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ದೂರಿದ್ದಾರೆ. ಆ ನಿಟ್ಟಿನಲ್ಲಿ ಕ್ರಿಶ್ಚಿಯನ್ ಸಮುದಾಯದ ಹೊಣೆಗಾರಿಕೆ ಮತ್ತು ನಂಬಿಕೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ ಎಂದು ಪಾದ್ರಿ ಸಲಹೆ ನೀಡಿದ್ದಾರೆ.
ಆದರೆ ನಿಜಾಂಶ ಏನೆಂದರೆ ಯುರೋಪ್‌ನಲ್ಲಿ ಶೀಘ್ರದಲ್ಲೇ ಅಥವಾ ತಡವಾಗಿಯಾದರೂ ಇಸ್ಲಾಮ್ ಜನಸಂಖ್ಯೆಯೇ ಪ್ರಭಾವಶಾಲಿಯಾಗಿ ಬೆಳೆಯಲಿದೆ ಎಂದು ತಿಳಿಸಿದ್ದಾರೆ.