ವಾಷಿಂಗ್ಟನ್, ಬುಧವಾರ, 8 ಸೆಪ್ಟೆಂಬರ್ 2010( 16:59 IST )
ಸೆಪ್ಟೆಂಬರ್ 11ರಂದು ಇಸ್ಲಾಮ್‌ನ ಪವಿತ್ರ ಧರ್ಮಗ್ರಂಥವಾದ ಕುರಾನ್ ಅನ್ನು ಸುಡುವುದಾಗಿ ಫ್ಲೋರಿಡಾದ ಚರ್ಚ್ ಶಪಥಗೈದಿದೆ. ಆದರೆ ಇಂತಹ ಅಗೌರವಯುತವಾದ ನಡವಳಿಕೆಯನ್ನು ಎಲ್ಲರೂ ತೀವ್ರವಾಗಿ ಖಂಡಿಸಿರುವುದು ಕೂಡ ತನಗೆ ಸಮಾಧಾನ ತಂದಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ತಿಳಿಸಿದ್ದಾರೆ.
ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ದಾಳಿ ನಡೆಸಿ ಸೆಪ್ಟೆಂಬರ್ 11ಕ್ಕೆ ಒಂಬತ್ತು ವರ್ಷವಾಗಲಿದೆ. ಆ ನಿಟ್ಟಿನಲ್ಲಿ ಸೆ.11ರಂದು ಇಸ್ಲಾಮ್‌ನ ಪವಿತ್ರ ಗ್ರಂಥವಾದ ಕುರಾನ್ ಅನ್ನು ಸುಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದಕ್ಕೆ ಕ್ರಿಶ್ಚಿಯನ್ ಸಮುದಾಯ ಬೆಂಬಲ ನೀಡಬೇಕೆಂದು ಫ್ಲೋರಿಡಾದ ಚರ್ಚ್‌ನ ಪಾದ್ರಿಯೊಬ್ಬರು ಕರೆ ನೀಡಿದ್ದರು.
ಏತನ್ಮಧ್ಯೆ ಸೆ.11ರಂದು ಕುರಾನ್ ಪ್ರತಿಯನ್ನು ಸುಡುವ ನಿರ್ಧಾರ ಸಮಂಜಸವಾದುದ್ದಲ್ಲ ಎಂದು ಹಿಲರಿ ಕ್ಲಿಂಟನ್ ಅವರು ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ ಇಫ್ತಾರ್ ಕೂಟದಲ್ಲಿ ಮುಸ್ಲಿಮ್ ಸಮುದಾಯದ ವಿಶೇಷ ಪ್ರತಿನಿಧಿ ಫರಾ ಪಂಡಿತ್ ಅವರೊಂದಿಗೆ ಮಾತುಕತೆ ನಡೆಸಿದ ವೇಳೆ ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅಮೆರಿಕದಲ್ಲಿ ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಜಾತಿಯ ಧರ್ಮಗಳನ್ನು ಗೌರವಿಸಲಾಗುವುದು. ಹಾಗಾಗಿ ಸೆ.11ರಂದು ಫ್ಲೋರಿಡಾ ಚರ್ಚ್ ಕುರಾನ್ ಸುಡುವ ನಿರ್ಧಾರವನ್ನು ಖಂಡಿಸುವುದಾಗಿ ಸ್ಪಷ್ಟಪಡಿಸಿದರು. ಅಲ್ಲದೇ, ಅಂತಹ ಕೃತ್ಯಕ್ಕೆ ಮುಂದಾದಲ್ಲಿ ಅವರ ಬಗ್ಗೆ ಕ್ರಮಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.