ಚೀನಾ ಮತ್ತು ಅಮೆರಿಕ ತಾವು ವೈರಿ ರಾಷ್ಟ್ರಗಳೆಂದು ಪರಿಗಣಿಸುವ ಅಗತ್ಯವಿಲ್ಲ ಎಂದು ಚೀನಾ ಅಮೆರಿಕಕ್ಕೆ ಸ್ಪಷ್ಟಡಿಸುವ ಮೂಲಕ ಎರಡು ರಾಷ್ಟ್ರಗಳ ನಡುವಿನ ಅಸಮಾಧಾನವನ್ನು ಶಮನಗೊಳಿಸಲು ಮುಂದಾಗಿದೆ.
ವಾಷಿಂಗ್ಟನ್‌ನಲ್ಲಿ ಅಮೆರಿಕ ಮತ್ತು ಚೀನಾ ನಡುವೆ ಉನ್ನತ ಮಟ್ಟದ ಚರ್ಚೆ ನಡೆಯಲಿದ್ದು, ಚೀನಾ ಅಧ್ಯಕ್ಷ ಹೂ ಜಿಂಟಾವೋ ತೆರಳಲಿದ್ದಾರೆ. ಆ ಹಿನ್ನೆಲೆಯಲ್ಲಿ ಚೀನಾ ಈ ಹೇಳಿಕೆಯನ್ನು ನೀಡಿದೆ.
ಟಿಬೆಟ್, ತೈವಾನ್ ಜತೆಗಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಉದ್ದಟತನ ತೋರುತ್ತಿದೆ ಎಂದು ಚೀನಾ ಕಿಡಿಕಾರಿತ್ತು. ಅಲ್ಲದೇ ಬೌದ್ಧ ಗುರು ದಲೈಲಾಮಾ ಕುರಿತು ಅಮೆರಿಕ ಆಹ್ವಾನ ನೀಡಿ ಆತಿಥ್ಯ ನೀಡಿರುವುದಕ್ಕೆ ಚೀನಾ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿ, ಇದರಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಹದಗೆಡುತ್ತದೆ ಎಂದು ಎಚ್ಚರಿಸಿತ್ತು.
ಆದರೆ ಉಭಯ ದೇಶಗಳು ವೈರಿಗಳೆಂದು ಭಾವಿಸಬೇಕಾಗಿಲ್ಲ ಎಂದು ಚೀನಾ ಅಮೆರಿಕಕ್ಕೆ ತಿಳಿಸಿದೆ. ಅಲ್ಲದೇ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಅಮೆರಿಕ ಮತ್ತು ಚೀನಾ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಪ್ರಯತ್ನಿಸುವುದು ಅಗತ್ಯ ಎಂದು ತಿಳಿಸಿದೆ.