ಉಗ್ರರ ವಿರುದ್ಧ ಅಮೆರಿಕ ನಡೆಸುತ್ತಿರುವ ಯುದ್ಧದಲ್ಲಿ ತಾಲಿಬಾನ್ ಜಯ ಸಾಧಿಸಿರುವುದಾಗಿ ಮುಲ್ಲಾ ಓಮರ್ ಅಫ್ಘಾನಿಸ್ತಾನಕ್ಕೆ ತಿಳಿಸಿದ್ದು, ಅಮೆರಿಕ ಅನಾವಶ್ಯಕವಾಗಿ ಮಿಲಿಟರಿ ಪಡೆ ಸಿಬ್ಬಂದಿಯ ಜೀವ ಕಳೆದುಕೊಳ್ಳುತ್ತಿರುವುದರ ಜೊತೆಗೆ ಬಿಲಿಯನ್‌ಗಟ್ಟಲೇ ಹಣ ವ್ಯಯಿಸುತ್ತಿದೆ ಎಂದು ಟೀಕಿಸಿದ್ದಾನೆ.
ಉಗ್ರರನ್ನು ಮಟ್ಟ ಹಾಕುವಲ್ಲಿ ಅಮೆರಿಕ ಪಡೆ ನಡೆಸುತ್ತಿರುವ ಯುದ್ಧದಲ್ಲಿ ತಾಲಿಬಾನ್ ಜಯಗಳಿಸಿರುವುದಾಗಿ ರಂಜಾನ್ ಹಬ್ಬದ ಮುಕ್ತಾಯದ ಅಂಗವಾಗಿ ಜಿಹಾದಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ ಈ ಘೋಷಣೆ ನೀಡಲಾಗಿದೆ.
ಅಲ್ಲದೇ ಅಮೆರಿಕ ಹಾಗೂ ಮಿತ್ರಪಡೆಗಳು ಅಫ್ಘಾನಿಸ್ತಾನದಿಂದ ಶೀಘ್ರವೇ ವಾಪಸಾಗಲಿವೆ ಎಂದು ಹೇಳಿರುವ ಓಮರ್, ಅಮೆರಿಕದ ಪಡೆಗಳು ನಾಗರಿಕರ ಹತ್ಯೆಯನ್ನು ತಡೆಯಬೇಕೆಂದು ಒತ್ತಾಯಿಸಿದ್ದಾನೆ.
ಅಲ್ಲಾಹನ ಅನುಗ್ರಹದಿಂದ ಇಸ್ಲಾಮ್ ರಾಷ್ಟ್ರದಲ್ಲಿ ತಾಲಿಬಾನ್ ಗೆಲುವು ಸಾಧಿಸಿದೆ. ಸೂಕ್ತವಾದ ಸಮಯದಲ್ಲಿ ದೇಶದಲ್ಲಿ ಇಸ್ಲಾಮ್ ಸ್ಥಾಪನೆಗೆ ಪ್ರಯತ್ನಿಸಿ, ಬಲವಾದ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿಯೂ ಓಮರ್ ಸಂದೇಶದಲ್ಲಿ ವಿವರಿಸಿದ್ದಾನೆ. ಕಳೆದ ಒಂಬತ್ತು ವರ್ಷಗಳಿಂದ ಅಮೆರಿಕ ಮತ್ತು ಮಿತ್ರ ಪಡೆಗಳು ಉಗ್ರರ ವಿರುದ್ಧ ಹೋರಾಡುತ್ತಿದ್ದರೂ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ದೂರಿದ್ದಾನೆ.