ದೇಶದ ಅಧ್ಯಕ್ಷಗಿರಿಯ ಅವಧಿ ಎಷ್ಟರವರೆಗೆ ಇರಬೇಕು ಅಥವಾ ಜೀವನ ಪರ್ಯಂತ ಅಧ್ಯಕ್ಷರಾಗಿಯೇ ಇರಬೇಕಾ ಎಂಬ ಬಗೆಗಿನ ಸಂವಿಧಾನ ತಿದ್ದುಪಡಿ ಕುರಿತು ಶ್ರೀಲಂಕಾ ಸಂಸತ್‌ನಲ್ಲಿ ಬುಧವಾರ ಚರ್ಚೆ ಆರಂಭವಾಗಿದ್ದು, ಈ ತಿದ್ದುಪಡಿ ಮೂಲಕ ಅಧ್ಯಕ್ಷ ಮಹೀಂದ ರಾಜಪಕ್ಸೆ ಸರ್ವಾಧಿಕಾರಿಯಾಗಲು ಹೊರಟಿರುವುದಾಗಿ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ.
ನಿರಂತರವಾಗಿ ಅಧ್ಯಕ್ಷರಾಗಿಯೇ ಮುಂದುವರಿಯಬೇಕೆಂಬ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಲು ಹೊರಟಿರುವ ಕ್ರಮವನ್ನು ಪ್ರಮುಖ ವಿರೋಧ ಪಕ್ಷವಾಗಿರುವ ಯುನೈಟೆಡ್ ನ್ಯಾಷನಲ್ ಪಾರ್ಟಿ ಸಂಸತ್‌ನಲ್ಲಿ ಚರ್ಚೆಯನ್ನು ಬಹಿಷ್ಕರಿಸಿ ಹೊರನಡೆದಿವೆ. ಸಂಸತ್ ಹೊರಗೆ ಅಧ್ಯಕ್ಷ ಮಹಿಂದ ರಾಜಪಕ್ಸೆಯ ಭಾವಚಿತ್ರವನ್ನು ಸುಟ್ಟು ಪ್ರತಿಭಟನೆ ನಡೆಸಿವೆ.
ಆದರೆ ಪ್ರತಿಪಕ್ಷಗಳು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಕೂಡ ಸಂವಿಧಾನ ತಿದ್ದುಪಡಿಗೆ ಅಗತ್ಯವಿರುವ ಬಹುಮತ ಲಂಕಾ ಮೈತ್ರಿಕೂಟದ ಸರಕಾರಕ್ಕಿದೆ. ಅಧ್ಯಕ್ಷರ ಅಧಿಕಾರಾವಧಿ ಹೆಚ್ಚಳದ ಸಂವಿಧಾನ ತಿದ್ದುಪಡಿಗೆ ಬೇಕಾದ 225 ಸಂಸದರ ಬೆಂಬಲ ಸರಕಾರಕ್ಕೆ ಇರುವುದರಿಂದ ಪ್ರತಿಪಕ್ಷಗಳ ಕೂಗಾಟ ವ್ಯರ್ಥವಾಗಲಿದೆ ಎಂಬುದು ಆಡಳಿತಾರೂಢ ಪಕ್ಷದ ಅಭಿಪ್ರಾಯವಾಗಿದೆ.
ಪ್ರಸಕ್ತವಾಗಿ ಸಂವಿಧಾನದಲ್ಲಿ ಅಧ್ಯಕ್ಷ ಗಾದಿಯ ಅವಧಿ 12 ವರ್ಷ (ಎರಡು ಬಾರಿ) ಎಂದು ನಿಗದಿಯಾಗಿದೆ. ಆ ನಿಟ್ಟಿನಲ್ಲಿ ರಾಜಪಕ್ಸೆ ಅವರು ಕಳೆದ ನವೆಂಬರ್ ತಿಂಗಳಿನಲ್ಲಿ ಎರಡನೇ ಬಾರಿ ಅಧ್ಯಕ್ಷರಾಗಿ ಮರು ನೇಮಕಗೊಂಡಿದ್ದರು.
ಅಧ್ಯಕ್ಷರ ಆಡಳಿತಾವಧಿ ಹೆಚ್ಚಳ ಕುರಿತ ಪ್ರಸ್ತಾವನೆ ಪ್ರಜಾಪ್ರಭುತ್ವಬಾಹಿರವಲ್ಲ ಎಂದು ಲಂಕಾ ಪ್ರಧಾನಿ ದಿಸ್ಸಾನಾಯಕೆ ಜಯರತ್ನೆ ಪ್ರತಿಕ್ರಿಯೆ ನೀಡಿದ್ದಾರೆ.
ಸಂವಿಧಾನದಲ್ಲಿ ತಿದ್ದುಪಡಿ ತರುವ ಮೂಲಕ ರಾಜಪಕ್ಸೆ ಸರ್ವಾಧಿಕಾರಿಯಾಗಲು ಹೊರಟಿದ್ದು,ಕುಟುಂಬ ರಾಜಕಾರಣ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ ರಾಜಪಕ್ಸೆಯ ಇಬ್ಬರು ಸಹೋದರರು ಹಿರಿಯ ಸಚಿವರಾಗಿದ್ದಾರೆ, ಮತ್ತೊಬ್ಬರು ರಕ್ಷಣಾ ಕಾರ್ಯದರ್ಶಿಯಾಗಿದ್ದಾರೆ. ಮಗ ಸಚಿವರಾಗಿದ್ದಾರೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.