ವಾಷಿಂಗ್ಟನ್, ಶುಕ್ರವಾರ, 10 ಸೆಪ್ಟೆಂಬರ್ 2010( 12:44 IST )
ಅಮೆರಿಕದ ಓಹಿಯೋ ಪ್ರಾಂತ್ಯ ಭಾರತದ ಹೊರಗುತ್ತಿಗೆ ನಿಷೇಧಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಭಾರತದ ಮೇಲೆ ಕೆಂಗಣ್ಣು ಬೀರಿದ್ದು, ಹೊರಗುತ್ತಿಗೆಗೆ ಪ್ರೋತ್ಸಾಹಿಸುವ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡುವುದಿಲ್ಲ ಎಂದು ಎಚ್ಚರಿಸುವ ಮೂಲಕ ಭಾರತದ ಹೊರಗುತ್ತಿಗೆ ವಹಿವಾಟಿನ ಮೇಲೆ ಬಲವಾದ ಹೊಡೆತ ನೀಡಿದ್ದಾರೆ.
ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಸುವ ಕಂಪೆನಿಗಳಿಗೆ ಮಾತ್ರ ತೆರಿಗೆ ವಿನಾಯತಿ ನೀಡಲಾಗುವುದೆ ಹೊರತು ವಿದೇಶಗಳಲ್ಲಿ ಕಂಪೆನಿಗಳನ್ನು ಹೊಂದಿ, ಅಲ್ಲಿ ಉದ್ಯೋಗ ನೀಡುವವರಿಗೆ ತೆರಿಗೆ ವಿಯಾಯತಿ ಲಭಿಸದು ಎಂದು ಎಚ್ಚರಿಸಿದ್ದಾರೆ.
ಅಮೆರಿಕ ಸರಕಾರದಿಂದ ತೆರಿಗೆ ವಿನಾಯಿತಿ ಪಡೆದುಕೊಂಡು ವಹಿವಾಟು ನಡೆಸುವ ಕಂಪನಿಗಳು ಹೊರಗುತ್ತಿಗೆ ಮೂಲಕ ಸಾಗರೋತ್ತರ ದೇಶಗಳಿಗೆ ಸಹಾಯ ಮಾಡುತ್ತಿವೆ. ಇದು ಸರಿಯಲ್ಲ, ಹಾಗಾಗಿ ತೆರಿಗೆ ವಿನಾಯಿತಿ ಬೇಕಿದ್ದರೆ ಸ್ಥಳೀಯರಿಗೆ ಉದ್ಯೋಗ ನೀಡಿ ಎಂದು ಸಲಹೆ ನೀಡಿದ್ದಾರೆ.
ಈ ನಿರ್ಧಾರ ಭಾರತಕ್ಕೆ ಆತಂಕವನ್ನು ತಂದೊಡ್ಡಲಿದ್ದು, ಶೇ.60ರಷ್ಟು ಐಟಿ ವಹಿವಾಟು ಅಮೆರಿಕವನ್ನೇ ಅವಲಂಬಿಸಿದೆ.ಅಲ್ಲದೇ ಬಿಪಿಒ ಕೂಡ ಅಮೆರಿಕವನ್ನೇ ನಂಬಿಕೊಂಡಿರುವುದರಿಂದ ಭಾರತಕ್ಕೆ ಇದೊಂದು ದೊಡ್ಡ ಹೊಡೆತವಾಗಿದೆ ಎಂದು ಐಟಿ ವಲಯ ಆತಂಕ ವ್ಯಕ್ತಪಡಿಸಿದೆ.
ಭಾರತ ವಿರೋಧಿ ಧೋರಣೆಯಲ್ಲ-ಬರಾಕ್: ಹೊರಗುತ್ತಿಗೆಗೆ ಪ್ರೋತ್ಸಾಹಿಸುವ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡುವುದಿಲ್ಲ ಎಂಬ ನಿರ್ಧಾರ ಭಾರತ ವಿರೋಧಿ ಧೋರಣೆಯಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸ್ಪಷ್ಟಪಡಿಸಿದ್ದಾರೆ. ಈ ನಿರ್ಧಾರ ಕುರಿತು ಉಭಯ ದೇಶಗಳ ಅಧ್ಯಕ್ಷರ ಭೇಟಿಯ ಸಂದರ್ಭದಲ್ಲೇ ಚರ್ಚೆ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.
ಈ ನಿರ್ಧಾರದ ಮೂಲ ಉದ್ದೇಶ ಅಮೆರಿಕದಲ್ಲೇ ಹೆಚ್ಚಿನ ಉದ್ಯೋಗ ಸೃಷ್ಟಿಸಿ ಕಂಪನಿಗಳಿಗೆ ಪ್ರೋತ್ಸಾಹ ನೀಡುವುದೇ ಆಗಿದೆ. ಆ ನೆಲೆಯಲ್ಲಿ ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಸುವ ಕಂಪೆನಿಗಳಿಗೆ ಮಾತ್ರ ತೆರಿಗೆ ವಿನಾಯಿತಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಕಂಪನಿಗಳಿಗೆ ಹೆಚ್ಚಿನ ಲಾಭ ತರುವ ಉದ್ದೇಶ ಹೊಂದಲಾಗಿದೆ ಎಂದು ಬರಾಕ್ ವಿವರಿಸಿದ್ದಾರೆ.