ಮೆಲ್ಬೊರ್ನ್, ಶುಕ್ರವಾರ, 10 ಸೆಪ್ಟೆಂಬರ್ 2010( 15:27 IST )
ಯುವಕನೊಬ್ಬ 99ರ ಅಜ್ಜಿಯ ಮೇಲೆ ಅತ್ಯಾಚಾರ ನಡೆಸಿ, ಹೊಡೆದು ಪರಾರಿಯಾಗಿರುವ ಘಟನೆ ಆಸ್ಟ್ರೇಲಿಯಾದ ನಗರದಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಓರ್ಮೊಂಡ್ನ ಕೂರಾನಂಗ್ ರಸ್ತೆ ಸಮೀಪ ಇರುವ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಅಜ್ಜಿಯ ಮೇಲೆ ಯುವಕ ಅತ್ಯಾಚಾರ ನಡೆಸಿರುವ ಘಟನೆ ಕಳೆದ ವಾರ ನಡೆದಿರುವುದಾಗಿ ದಿ ಏಜ್ ವರದಿ ಶುಕ್ರವಾರ ಬಹಿರಂಗಪಡಿಸಿದೆ.
ಅಜ್ಜಿ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಮನೆಯ ಬಾಗಿಲು ಬಡಿದಿದ್ದ, ನಂತರ ಬಲವಂತವಾಗಿ ಒಳನುಗ್ಗಿ ಈ ದುಷ್ಕೃತ್ಯ ನಡೆಸಿದ್ದ. ಯುವಕನ ವಯಸ್ಸು ಅಂದಾಜು 17ರಿಂದ 22 ಇರಬಹುದಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಬಲವಂತವಾಗಿ ಮನೆಯೊಳಗೆ ನುಗ್ಗಿದ ಕಾಮುಕ ಯುವಕ ಅಜ್ಜಿಗೆ ಯದ್ವಾತದ್ವಾ ಹೊಡೆದು ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಎಂದು ವಿವರಿಸಿದ್ದಾರೆ.
ಅತ್ಯಾಚಾರದ ಘಟನೆಯಿಂದ ಅಜ್ಜಿ ಹಾಗೂ ಮನೆಯವರಿಗೆ ಆಘಾತ ತಂದೊಡ್ಡಿದೆ ಎಂದು ಸೆಕ್ಸುವಲ್ ಕ್ರೈಮ್ಸ್ ತಂಡದ ಡಿಟೆಕ್ಟಿವ್ ಇನ್ಸ್ಪೆಕ್ಟರ್ ಗ್ಲೆನ್ನ್ ಡೇವಿಸ್ ತಿಳಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆರೋಪಿಯನ್ನು ಶೀಘ್ರದಲ್ಲೇ ಪತ್ತೆ ಹಚ್ಚುವುದಾಗಿ ಹೇಳಿದರು.
ಘಟನೆಯಿಂದ ಅಜ್ಜಿ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು ಒಂದು ವಾರಗಳ ಕಾಲ ಚಿಕಿತ್ಸೆಯ ಅಗತ್ಯವಿದೆ ಎಂದು ಡೇವಿಸ್ ತಿಳಿಸಿದ್ದಾರೆ.