ಕೊನೆಗೂ ಒತ್ತಡಕ್ಕೆ ಮಣಿದ ಫ್ಲೋರಿಡಾ ಚರ್ಚ್: ಕುರಾನ್ ಸುಡಲ್ಲ
ವಾಷಿಂಗ್ಟನ್, ಶುಕ್ರವಾರ, 10 ಸೆಪ್ಟೆಂಬರ್ 2010( 15:46 IST )
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿರೋಧ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಎಚ್ಚರಿಕೆಯ ಹಿನ್ನೆಲೆಯಲ್ಲಿ ಕೊನೆಗೂ ಫ್ಲೋರಿಡಾ ಚರ್ಚ್‌ನ ಪಾದ್ರಿ ಸೆ.11ರಂದು ಇಸ್ಲಾಮ್‌ನ ಪವಿತ್ರ ಧರ್ಮಗ್ರಂಥವಾದ ಕುರಾನ್ ಸುಡುವ ನಿರ್ಧಾರವನ್ನು ರದ್ದುಪಡಿಸಿರುವುದಾಗಿ ತಿಳಿಸಿದ್ದಾರೆ.
ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯ ಅಂಗವಾಗಿ ಸೆಪ್ಟೆಂಬರ್ 11ರಂದು 9ನೇ ವಾರ್ಷಿಕೋತ್ಸವ ಆಚರಣೆಯ ಸಂದರ್ಭದಲ್ಲಿ ಕುರಾನ್ ಪ್ರತಿಗಳನ್ನು ಸುಡುವುದಾಗಿ ಫ್ಲೋರಿಡಾ ಚರ್ಚ್ ಕರೆ ನೀಡಿತ್ತು. ಆದರೆ ಚರ್ಚ್ ಪಾದ್ರಿಯ ಈ ನಿರ್ಧಾರಕ್ಕೆ ವಿಶ್ವದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ ಅಧ್ಯಕ್ಷ ಬರಾಕ್ ಕೂಡ ನಿರ್ಧಾರವನ್ನು ಕೈಬಿಡುವಂತೆ ಮನವಿ ಮಾಡಿಕೊಂಡಿದ್ದರು.
ಕುರಾನ್ ಸುಡುವ ನಿರ್ಧಾರದಿಂದಾಗಿ ಅಲ್ ಖಾಯಿದಾ ಸೇರಿದಂತೆ ಉಗ್ರಗಾಮಿ ಸಂಘಟನೆಗಳ ಆತ್ಮಹತ್ಯಾ ಬಾಂಬ್ ದಾಳಿಗೆ ಪ್ರಚೋದನೆ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದ್ದರು.
ಫ್ಲೋರಿಡಾ ಚರ್ಚ್ ಪಾದ್ರಿ ಟೆರ್ರಿ ಜೋನ್ಸ್ ಅವರು ಕುರಾನ್ ಸುಡುವ ನಿರ್ಧಾರವನ್ನು ಕೈಬಿಡುವಂತೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ರೋಬರ್ಟ್ ಗೇಟ್ಸ್ ಒತ್ತಾಯಿಸಿರುವುದಾಗಿ ಪೆಂಟಗಾನ್ ತಿಳಿಸಿದೆ.
ಈ ಮನವಿಯ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಜೋನ್ಸ್, ಕುರಾನ್ ಸುಡುವ ನಿರ್ಧಾರವನ್ನು ಕೈಬಿಟ್ಟಿರುವುದಾಗಿ ಸ್ಪಷ್ಟಪಡಿಸಿದರು. ಆದರೆ ಈ ನಿರ್ಧಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಿರುವುದಾಗಿ ಹೇಳಿದರು.