ಇಸ್ಲಾಮಾಬಾದ್, ಶುಕ್ರವಾರ, 10 ಸೆಪ್ಟೆಂಬರ್ 2010( 18:13 IST )
ಪಾಕಿಸ್ತಾನಕ್ಕೆ ಪ್ರಜಾಪ್ರಭುತ್ವದ ಅಗತ್ಯವಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವ ಪ್ರಧಾನಿ ಸೈಯದ್ ಯೂಸೂಫ್ ರಾಜಾ ಗಿಲಾನಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನೇತೃತ್ವದ ಸರಕಾರ ತನ್ನ ಆಡಳಿತಾವಧಿಯನ್ನು ಪೂರ್ಣಗೊಳಿಸಲಿದೆ. ಆದರೆ ದೇಶದಲ್ಲಿ ಮತ್ತೆ ಮಿಲಿಟರಿ ಆಡಳಿತ ಬರುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆರ್ಮಿ ದೇಶದ ಆಡಳಿತವನ್ನು ಮತ್ತೆ ಕೈಗೆ ತೆಗೆದುಕೊಳ್ಳುತ್ತದೆ ಎಂಬ ಸಾಧ್ಯತೆಯನ್ನು ಅವರು ಅಲ್ಲಗಳೆದರು. ಪಾಕ್‌ನ ನ್ಯಾಯಾಂಗ ಸ್ವತಂತ್ರವಾಗಿದೆ ಮತ್ತು ಪ್ರಜಾಪ್ರಭುತ್ವ ಪರವಾಗಿದೆ. ಆದರೆ ಕೆಲವರು ದೇಶದಲ್ಲಿ ಮಿಲಿಟರಿ ಆಡಳಿತ ಜಾರಿಯಾಗಲಿದೆ ಎಂದು ಚರ್ಚಿಸುತ್ತಿದ್ದಾರೆ. ಅದು ಸುಮ್ಮನೆ ಸಮಯ ವ್ಯರ್ಥ ಮಾಡುವ ಚರ್ಚೆ ಎಂದು ಗಿಲಾನಿ ತಿಳಿಸಿರುವುದಾಗಿ ಮಾಧ್ಯಮದ ವರದಿ ಹೇಳಿದೆ.
ಮಾಧ್ಯಮಗಳು, ರಾಜಕೀಯ ಪಕ್ಷಗಳು ಸೇರಿದಂತೆ ಬಹುಸಂಖ್ಯೆ ಜನರು ದೇಶಕ್ಕೆ ಪ್ರಜಾಪ್ರಭುತ್ವವೇ ಅಗತ್ಯ ಎಂದು ಸ್ಪಷ್ಟ ನಿಲುವು ಹೊಂದಿದ್ದಾರೆ. ಅಲ್ಲದೇ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಬಾಹಿರವಾದ ಯಾವುದೇ ಬೆಳವಣಿಗೆಯನ್ನು ಇಡೀ ವಿಶ್ವವೇ ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.
ಮಿಲಿಟರಿ ದೇಶದ ನಾಗರಿಕ ಆಡಳಿತದ ಒಂದು ಭಾಗವಾಗಿದೆ ಮತ್ತು ಸರಕಾರದ ಮನವಿ ಮೇರೆಗೆ ನೆರೆ ಸಂತ್ರಸ್ತರಿಗಾಗಿ ಆಹಾರ ಪೂರೈಕೆ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಗಿಲಾನಿ ಈ ಸಂದರ್ಭದಲ್ಲಿ ಹೇಳಿದರು.