ವಾಷಿಂಗ್ಟನ್, ಶುಕ್ರವಾರ, 10 ಸೆಪ್ಟೆಂಬರ್ 2010( 18:38 IST )
ಸುಮಾರು 3.6 ಮಿಲಿಯನ್ ಡಾಲರ್ ಮೌಲ್ಯದ ಡ್ರಗ್ಸ್ ಅನ್ನು ಕಳ್ಳಸಾಗಣೆ ಮಾಡುತ್ತಿದ್ದ ಭಾರತೀಯ ಮೂಲದ ಟ್ರಕ್ ಚಾಲಕನೊಬ್ಬನನ್ನು ಅಮೆರಿಕದ ಅಧಿಕಾರಿಗಳು ತಿಳಿಸಿದ್ದು, ಇದು ದೇಶದ ಇತಿಹಾಸದಲ್ಲಿಯೇ ದೊಡ್ಡ ಸ್ಮಗ್ಲಿಂಗ್ ಪ್ರಕರಣವಾಗಿದೆ ಎಂದು ಹೇಳಿದ್ದಾರೆ.
ಅಮೆರಿಕ ಮತ್ತು ಕೆನಡಾ ಗಡಿಭಾಗದಲ್ಲಿ ಕೆನಡಾ ನಿವಾಸಿ ರವೀಂದ್ರ ಕುಮಾರ್ ಆರೋರಾ ಎಂಬಾತ ಟ್ರಕ್‌ನಲ್ಲಿ ತೆರಳುತ್ತಿದ್ದ ವೇಳೆ, ಟ್ರಕ್ ನಿಲ್ಲಿಸಿ ವಿಚಾರಣೆ ನಡೆಸಿದಾಗ ಡ್ರಗ್ಸ್ ಸಾಗಣೆ ವಿಷಯ ಬಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಅಮೆರಿಕ ಮತ್ತು ಕೆನಡಾ ನಡುವಿನ ಅಂತಾರಾಷ್ಟ್ರೀಯ ಸೇತುವೆ ಲೆವಿನ್‌ಸ್ಟನ್-ಕ್ವೀನ್ಸ್‌ಸ್ಟನ್ ಸಮೀಪ ಆತನನ್ನು ಬಂಧಿಸಲಾಗಿತ್ತು.
ಲಾರಿಯೊಳಗೆ ಸುಮಾರು 97 ಪ್ಯಾಕೇಟ್ ಕೊಕೇನ್ ಪತ್ತೆ ಹಚ್ಚಿದ್ದು, ಇದರ ಮೌಲ್ಯ ಸುಮಾರು 3.6ಮಿಲಿಯನ್ ಡಾಲರ್ ಆಗಿದೆ. ಇದೊಂದು ಬೃಹತ್ ಪ್ರಮಾಣದ ಡ್ರಗ್ಸ್ ಸಾಗಾಟ ಪ್ರಕರಣವಾಗಿದೆ ಎಂದು ಬಫೆಲೋ ಬಂದರು ನಿರ್ದೇಶಕ ಜೋಸೆಫ್.ಜೆ.ವಿಲ್ಸನ್ ತಿಳಿಸಿದ್ದಾರೆ. ಬಂಧಿತನ ವಿರುದ್ಧ ಮಾದಕ ವಸ್ತು ಸಾಗಾಟದ ಪ್ರಕರಣ ದಾಖಲಿಸಲಾಗಿದೆ.