ಶಸ್ತ್ರಾಸ್ತ್ರ ಹೋರಾಟವನ್ನು ಕೈಬಿಟ್ಟು ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಫ್ಘಾನಿಸ್ತಾನದಲ್ಲಿ ದೀರ್ಘಕಾಲದಿಂದ ನಡೆಸುತ್ತಿರುವ ಸಮರಕ್ಕೆ ಅಂತ್ಯ ಹಾಡಬೇಕೆಂದು ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯ್ ಶುಕ್ರವಾರ ತಾಲಿಬಾನ್ ಸಂಘಟನೆಯ ಮುಖಂಡ ಮುಲ್ಲಾ ಮೊಹಮ್ಮದ್ ಓಮರ್‌ಗೆ ಕರೆ ನೀಡಿದ್ದಾರೆ.
'ತಾಲಿಬಾನ್ ಮುಖಂಡ ಮುಲ್ಲಾ ಮೊಹಮ್ಮದ್ ಓಮರ್ ಶಾಂತಿ ಮಾತುಕತೆ ಪ್ರಕ್ರಿಯೆಯಲ್ಲಿ ಕೈಜೋಡಿಸಲಿದ್ದಾರೆ ಎಂಬ ವಿಶ್ವಾಸವಿದೆ. ಬಾಂಬ್ ಸ್ಫೋಟ,ಮಿಸೈಲ್ ದಾಳಿ ಕೈಬಿಟ್ಟು ಅಫ್ಘಾನಿಸ್ತಾನದ ಮಕ್ಕಳು, ಮಹಿಳೆಯರು, ವ್ಯಕ್ತಿಗಳನ್ನು ಕೊಲ್ಲುವುದನ್ನು ನಿಲ್ಲಿಸಿ ಎಂದು ಕರ್ಜಾಯ್ ಮನವಿ ಮಾಡಿಕೊಂಡಿದ್ದಾರೆ.
ಅಧ್ಯಕ್ಷರ ಅರಮನೆಯಲ್ಲಿ ಸರಕಾರದ ಸಚಿವರು, ಅಧಿಕಾರಿಗಳು ಈದ್ ಪ್ರಾರ್ಥನಾ ಕೂಟದಲ್ಲಿ ಪಾಲ್ಗೊಂಡಿದ್ದ ವೇಳೆಯಲ್ಲಿ ಮಾತನಾಡಿದ ಕರ್ಜಾಯ್, ತಾಲಿಬಾನ್ ಉಗ್ರರು ಶಾಂತಿ ಮಾತುಕತೆಗೆ ಕೈಜೋಡಿಸುವ ಮೂಲಕ ಹಿಂಸೆಯನ್ನು ಕೈಬಿಡಬೇಕು ಎಂದು ತಿಳಿಸಿದರು.
ಕಳೆದ ಒಂಬತ್ತು ವರ್ಷಗಳಿಂದ ನಡೆಯುತ್ತಿರುವ ಹೋರಾಟದಿಂದಾಗಿ ಅಮಾಯಕರು ಬಲಿಯಾಗುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರ ಎಂದರೆ ತಾಲಿಬಾನ್ ಶಾಂತಿ ಮಾತುಕತೆಗೆ ಮುಂದಾಗಬೇಕು ಎಂದರು.