ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ ಪರ್ವೆಜ್ ಮುಶರ್ರಫ್ ಮತ್ತೆ ರಾಜಕೀಯಕ್ಕೆ ಮರಳುವುದಾಗಿ ಶಪಥಗೈದಿದ್ದು, ದೇಶದಲ್ಲಿ ಸುಭದ್ರ ಆಡಳಿತಕ್ಕೆ ಶ್ರಮಿಸುವ ನಿಟ್ಟಿನಲ್ಲಿ ಮತ್ತೆ ಪಾಕ್ ಅಧ್ಯಕ್ಷಗಾದಿ ಏರುವ ಕನಸು ಹೊಂದಿರುವುದಾಗಿ ತಿಳಿಸಿದ್ದಾರೆ.
'ಪಾಕಿಸ್ತಾನದಲ್ಲಿ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಇರಾದೆ ಹೊಂದಿರುವುದಾಗಿ ನಿವೃತ್ತ ಮಿಲಿಟರಿ ಆಡಳಿತಗಾರ ಮುಷಶ್ರಫ್ ತಿಳಿಸಿದ್ದು, ಮುಂದಿನ 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ' ಎಂದು ವಿವರಿಸಿದ್ದಾರೆ.
ತನ್ನ ಜೀವಕ್ಕೆ ಅಪಾಯ ಇರುವ ಹಿನ್ನೆಲೆಯಲ್ಲಿ ಚುನಾವಣೆಗೂ ಮುನ್ನ ಪಾಕಿಸ್ತಾನಕ್ಕೆ ಮರಳುವುದಿಲ್ಲ ಎಂದು ಮುಷ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿರುವ ಪಾಕಿಸ್ತಾನವನ್ನು ಮೇಲಕ್ಕೆತ್ತಬೇಕಾದರೆ, ಹೊಸ ಆಡಳಿತವೇ ಬೇಕಾಗಿದೆ ಎಂದು ತಿಳಿಸಿದ್ದಾರೆ. ನಾನು ಶೇ.200ರಷ್ಟು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಆ ನಿಟ್ಟಿನಲ್ಲಿ ಹೊಸ ಪಕ್ಷ ಕೂಡ ಸ್ಥಾಪಿಸಿ ಸ್ಪರ್ಧೆಗಳಿಯುತ್ತೇನೆ. ಇದು ನನ್ನ ಅಭಿಲಾಷೆ ಎಂದು ಲಂಡನ್‌ನಲ್ಲಿ ಶುಕ್ರವಾರ ಮಾತನಾಡುತ್ತ ತಿಳಿಸಿದ್ದಾರೆ.
ತಾನು ಮತ್ತೆ ಪಾಕಿಸ್ತಾನಕ್ಕೆ ಮರಳಿ ಚುನಾವಣೆಯಲ್ಲಿ ಸ್ಪರ್ಧಿಸಿ, ಅಧ್ಯಕ್ಷಗಾದಿ ಏರುವುದೇ ತನ್ನ ಮುಂದಿನ ಗುರಿಯಾಗಿದೆ ಎಂದು ಮುಷರ್ರಫ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.