ಇಸ್ಲಾಮಾಬಾದ್, ಶನಿವಾರ, 11 ಸೆಪ್ಟೆಂಬರ್ 2010( 15:07 IST )
13ರ ಹರೆಯದ ದಲಿತ ಬಾಲಕಿಯನ್ನು ಅಪಹರಿಸಿ ಆಕೆಯನ್ನು ಬಲವಂತವಾಗಿ ಇಸ್ಲಾಮ್ ಧರ್ಮಕ್ಕೆ ಮತಾಂತರ ಮಾಡಿದ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಲೈಯಾರಿ ನಗರದಲ್ಲಿರುವ ಮನೆಯಿಂದ ಬುಧವಾರ ಪೂನಂ ಎಂಬ ದಲಿತ ಬಾಲಕಿಯನ್ನು ಅಪಹರಿಸಿರುವುದಾಗಿ ಆಕೆಯ ಚಿಕ್ಕಪ್ಪ ಭಾನ್ವ್ರೊ ಡೈಲಿ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ. ಆದರೆ ಪೂನಂ ಲೈಯಾರಿಯ ಮದರಸಾದಲ್ಲಿ ಇದ್ದಿರುವುದಾಗಿ ನೆರೆಹೊರೆಯವರು ವಿಷಯ ಬಹಿರಂಗಪಡಿಸಿದ್ದರು.
ದಲಿತ ಬಾಲಕಿಯನ್ನು ಬಲವಂತದಿಂದ ಮೌಲ್ವಿ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಳಿಸಿದ್ದು, ತನ್ನನ್ನು ಹೊರಹೋಗಲು ಬಿಡುತ್ತಿಲ್ಲ. ಇದೀಗ ತಾನು ಮುಸ್ಲಿಮ್ ಆಗಿ ಮದರಸಾದಲ್ಲಿಯೇ ಇದ್ದಿರುವುದಾಗಿ ಆಕೆ ತಿಳಿಸಿರುವುದಾಗಿ ಭಾನ್ವ್ರೊ ವಿವರಿಸಿದ್ದಾರೆ.
ಪೂನಂಳನ್ನು ಅಪಹರಿಸಿರುವುದಾಗಿ ಚಾಕಿವಾರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿರುವುದಾಗಿ ಆಕೆಯ ಚಿಕ್ಕಪ್ಪ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.