ಪ್ರಾರ್ಥನಾ ನಿರತ ಕ್ರಿಶ್ಚಿಯನ್ ಸಮುದಾಯದವರ ಮೇಲೆ ಹಲ್ಲೆ ನಡೆಸಿ, ಸಚಿವರ ಮೇಲೂ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡೋನೇಷ್ಯಾ ಅಧ್ಯಕ್ಷರು ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶ ನೀಡಿದ್ದಾರೆ.
ಭಾನುವಾರ ಪ್ರಾರ್ಥನಾ ನಿರತ ಕ್ರಿಶ್ಚಿಯನ್‌ರಿಗೆ ಚೂರಿಯಿಂದ ಇರಿದು, ಸಚಿವರ ಮೇಲೂ ಮರದ ಕಟ್ಟಿಗೆಯಿಂದ ಹಲ್ಲೆ ನಡೆಸಿರುವ ಘಟನೆಯ ಹೊಣೆಯನ್ನು ಈವರೆಗೂ ಯಾರು ಹೊತ್ತುಕೊಂಡಿಲ್ಲ. ಆದರೆ ಈ ದಾಳಿಯ ಹಿಂದೆ ಇಸ್ಲಾಮ್ ಬಂಡುಕೋರರ ಕೈವಾಡ ಇರುವುದಾಗಿ ಶಂಕಿಸಲಾಗಿದೆ.
ಬಾಟಾಕ್ ಕ್ರಿಶ್ಚಿಯನ್ ಪ್ರೊಟೆಸ್ಟಂಟ್ ಚರ್ಚ್‌ನ ವಿರುದ್ಧ ಈ ಮೊದಲು ಎಚ್ಚರಿಕೆ ನೀಡಿರುವುದು ಕೂಡ ದಾಳಿಯ ಹಿಂದೆ ಇಸ್ಲಾಮ್ ಬಂಡುಕೋರರ ಕೈವಾಡ ಇರುವ ಬಗ್ಗೆ ಶಂಕಿಸಲಾಗಿದೆ. ಇತ್ತೀಚೆಗೆ ಪ್ರೊಟೆಸ್ಟಂಟ್ ಚರ್ಚ್ ಸದಸ್ಯರ ಮೇಲೆ ಶೂ ಹಾಗೂ ಬಾಟಲಿಗಳನ್ನು ಎಸೆದ ಘಟನೆ ನಡೆದಿತ್ತು.
ಭಾನುವಾರ ಕೂಡ ಪ್ರೊಟೆಸ್ಟಂಟ್ ಸಮುದಾಯದವರು ಪ್ರಾರ್ಥನೆ ನಡೆಸಲು ತೆರಳುತ್ತಿದ್ದ ವೇಳೆ ಮೋಟಾರ್ ಬೈಕ್‌ನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಏಕಾಏಕಿ ನೆಗೆದು ಚೂರಿಯಿಂದ ಇರಿದು ಪರಾರಿಯಾಗಿರುವುದಾಗಿ ಸ್ಥಳೀಯ ಪೊಲೀಸ್ ಅಧಿಕಾರಿ ಇಮಾಮ್ ಸುಗಿನಾಟೋ ತಿಳಿಸಿದ್ದಾರೆ.
ಘಟನೆ ಕುರಿತಂತೆ ಒಂಬತ್ತು ಮಂದಿ ಸಾಕ್ಷಿಗಳನ್ನು ಪ್ರಶ್ನಿಸಿ ವಿಚಾರಣೆ ನಡೆಸಲಾಗಿದೆ. ಆ ನಿಟ್ಟಿನಲ್ಲಿ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಸ್ಥಳೀಯ ಡಿಟೆಕ್ಟಿವ್ ಕ್ಯಾಪ್ಟನ್ ಆಡೆ ಅರೈ ವಿವರಿಸಿದ್ದಾರೆ.
ಇಂಡೋನೇಷ್ಯಾ ಜಾತ್ಯೀತ ದೇಶವಾಗಿದ್ದು, ಸುಮಾರು 237 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಜಗತ್ತಿನ ಇನ್ನಿತರ ದೇಶಗಳಿಗಿಂತ ಹೆಚ್ಚಿನ ಮುಸ್ಲಿಮರು ಇಲ್ಲಿ ವಾಸವಾಗಿದ್ದಾರೆ. ಅಲ್ಲದೇ ಇಲ್ಲಿನ ಅಲ್ಪಸಂಖ್ಯಾತ ಸಮುದಾಯದ ಮೇಲೆ ಇತ್ತೀಚೆಗೆ ದಾಳಿಗಳು ನಡೆಯುತ್ತಿರುವುದನ್ನು ಸ್ಮರಿಸಿಕೊಳ್ಳಬಹುದಾಗಿದೆ.