ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಮಾನದಲ್ಲಿಯೇ ಮಗುವನ್ನು ಹೆತ್ತು ತ್ಯಜಿಸಿ ಹೋದ ತಾಯಿ! (Manila's airport | garbage bag | Newborn found | nurses | Gulf Air plane)
ಮಧ್ಯ ಏಷ್ಯಾದಿಂದ ಬಂದ ವಿಮಾನವೊಂದರಲ್ಲಿ ತಾಯಿಯೊಬ್ಬಳು ನವಜಾತ ಶಿಶುವನ್ನು ಕಸ ತುಂಬುವ ಬ್ಯಾಗ್‌ನಲ್ಲಿ ಇಟ್ಟು ಬಿಟ್ಟು ಹೋಗಿರುವ ಘಟನೆ ಭಾನುವಾರ ನಡೆದಿದ್ದು, ಮಗುವಿನ ತಾಯಿ ಯಾರೆಂಬುದನ್ನು ಪತ್ತೆ ಹಚ್ಚಲು ಫಿಲಿಫೈನ್ಸ್ ಅಧಿಕಾರಿಗಳು ಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.
ಮೈತುಂಬಾ ರಕ್ತದಲ್ಲಿ ಅದ್ದಿಹೋಗಿರುವ, ಟಿಸ್ಯು ಪೇಪರ್‌ನಲ್ಲಿ ಸುತ್ತಿ ಇಟ್ಟಿದ್ದ ಗಂಡು ಮಗುವನ್ನು ಭದ್ರತಾ ಅಧಿಕಾರಿಗಳು ವಿಮಾನ ನಿಲ್ದಾಣದ ಕ್ಲಿನಿಕ್ ತಂದು ಶುಶ್ರೂಷೆ ನೀಡಿದ್ದರು. ವೈದ್ಯರು ಮತ್ತು ನರ್ಸ್ ಮಗುವನ್ನು ಶುಚಿಗೊಳಿಸಿ, ಬಟ್ಟೆಯಿಂದ ಸುತ್ತಿ ಬಾಟಲಿ ಹಾಲು ನೀಡಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ವಿವರಿಸಿದ್ದಾರೆ.
ಮಗುವನ್ನು ಶುದ್ಧಗೊಳಿಸಿದ ನಂತರ ನಿಧಾನಕ್ಕೆ ಅತ್ತಿರುವುದಾಗಿ ವಿಮಾನ ನಿಲ್ದಾಣ ಕ್ಲಿನಿಕ್ ನರ್ಸ್ ಕಾಟೆ ಕಾಲ್‌ವೋ ತಿಳಿಸಿದ್ದಾರೆ. ಮಗು ಆರೋಗ್ಯವಂತವಾಗಿದ್ದು, ಸೂಕ್ತ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಬಹರೈನ್‌ನಿಂದ ಆಗಮಿಸಿದ್ದ ಮಹಿಳಾ ಪ್ರಯಾಣಿಕರಾರೋ ಗಲ್ಫ್ ವಿಮಾನದಲ್ಲಿಯೇ ನವಜಾತ ಶಿಶುವಿಗೆ ಜನ್ಮ ನೀಡಿ ಕಸ ಹಾಕುವ ಬ್ಯಾಗ್‌ನಲ್ಲಿ ಇಟ್ಟು ತ್ಯಜಿಸಿ ಹೋಗಿರುವುದಾಗಿ ಭದ್ರತಾ ಅಧಿಕಾರಿಗಳು ವಿವರಿಸಿದ್ದಾರೆ. ಈ ಬಗ್ಗೆ ಗಲ್ಫ್ ವಿಮಾನ ನಿಲ್ದಾಣ ಅಧಿಕಾರಿಗಳು ಕೂಡ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸೋಶಿಯಲ್ ವೆಲ್‌ಫೇರ್ ಕಾರ್ಯದರ್ಶಿ ಡಿಂಕಿ ಸೋಲಿಮನ್ ಆಕ್ರೋಶ ವ್ಯಕ್ತಪಡಿಸಿದ್ದು, ಹಸುಗೂಸನ್ನು ಹೆತ್ತು ತ್ಯಜಿಸಿ ಹೋಗಿರುವ ತಾಯಿಯನ್ನು ಕೂಡಲೇ ಪತ್ತೆ ಹಚ್ಚಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪೊಲೀಸರಿಗೆ ಆದೇಶ ನೀಡಿದ್ದಾರೆ.
ಯಾವುದೇ ಮಗುವನ್ನು ಈ ರೀತಿಯಲ್ಲಿ ಅನಾಥವಾಗಿ ಬಿಟ್ಟು ಹೋಗುವುದು ಸರಿಯಾದ ನಿರ್ಧಾರವಲ್ಲ ಎಂದು ಸೋಲಿಮನ್, ಮಗುವನ್ನು ತಾಯಿಯ ಸಂಬಂಧಿಗಳಿಗಾಗಲಿ ಅಥವಾ ದತ್ತು ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.