ಇಸ್ಲಾಮಾಬಾದ್, ಸೋಮವಾರ, 13 ಸೆಪ್ಟೆಂಬರ್ 2010( 17:47 IST )
ಪಾಕಿಸ್ತಾನದ ನೆರೆ ಸಂತ್ರಸ್ತರಿಗಾಗಿ ಅಂತಾರಾಷ್ಟ್ರೀಯ ಸಮುದಾಯ ನೀಡಿದ ಆರ್ಥಿಕ ನೆರವಿನಲ್ಲಿ ಯಾವುದೇ ದುರುಪಯೋಗವಾಗಿಲ್ಲ ಎಂದು ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ತಿಳಿಸಿದ್ದಾರೆ.
ಪಾಕ್ ನೆರೆ ಸಂತ್ರಸ್ತರಿಗಾಗಿ ಅಂತಾರಾಷ್ಟ್ರೀಯ ಸಮುದಾಯದಿಂದ 291 ಮಿಲಿಯನ್ ಆರ್ಥಿಕ ನೆರವು ಪಡೆದಿರುವುದಾಗಿ ವಿಶ್ವಸಂಸ್ಥೆ ತಿಳಿಸಿದೆ. ಆದರೆ ನೆರೆ ಸಂತ್ರಸ್ತರ ಪರಿಹಾರ ನಿಧಿಯಲ್ಲಿ ದುರುಪಯೋಗವಾಗಿದೆ ಎಂಬ ಆರೋಪಕ್ಕೆ ಜರ್ದಾರಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ನೆರೆ ಸಂತ್ರಸ್ತರ ಪರಿಹಾರ ನಿಧಿಯಲ್ಲಿ ಒಂದೇ ಒಂದು ಹಗರಣ ನಡೆದಿದೆ ಎಂಬುದನ್ನು ಸಾಬೀತುಪಡಿಸಲು ಜರ್ದಾರಿ ಸವಾಲು ಹಾಕಿದ್ದಾರೆ. ನೆರೆ ಪರಿಹಾರ ನಿಧಿಯಲ್ಲಿ ದುರುಪಯೋಗವಾಗಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ. ಅಲ್ಲದೇ ಪ್ರವಾಹ ಪೀಡಿತ ಸಂತ್ರಸ್ತರಿಗಾಗಿ ಇನ್ನೂ ಹೆಚ್ಚಿನ ನೆರವಿಗಾಗಿ ಸರಕಾರ ಶ್ರಮಿಸುತ್ತಿರುವುದಾಗಿ ತಿಳಿಸಿದ್ದಾರೆ.
ಪಾಕಿಸ್ತಾನ ನೆರೆ ಸಂತ್ರಸ್ತರಿಗಾಗಿ ನೀಡಿದ ಪರಿಹಾರದಲ್ಲಿ ಭಾರೀ ಪ್ರಮಾಣದಲ್ಲಿ ಹಗರಣ ನಡೆದಿರುವ ಸಾಧ್ಯತೆ ಇದೆ ಎಂದು ದಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಆ ಕಾರಣಕ್ಕಾಗಿ ನೆರೆ ಪರಿಹಾರವನ್ನು ಸಮರ್ಪಕವಾಗಿ ಬಳಸುವಂತೆ ವಿಶ್ವಸಂಸ್ಥೆ ಪಾಕಿಸ್ತಾನಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ.