ಅಮೆರಿಕಾದ ಪಾದ್ರಿಯೊಬ್ಬ ಇಸ್ಲಾಂ ಪವಿತ್ರ ಗ್ರಂಥ ಕುರಾನ್‌ಗೆ ಅಪಮಾನ ಮಾಡಲು ಹೊರಟಿದ್ದ ಪ್ರಕರಣ ಮುಗಿಯುತ್ತಿದ್ದಂತೆ ಅತ್ತ ಆಸ್ಟ್ರೇಲಿಯಾದ ವಕೀಲನೊಬ್ಬ ಕುರಾನ್ ಮತ್ತು ಬೈಬಲ್ ಎರಡೂ ಗ್ರಂಥಗಳ ಪುಟಗಳನ್ನು ಬೆಂಕಿಗೆ ಆಹುತಿ ಮಾಡಿ, ಅದರ ಧೂಮವನ್ನು ಸೇವಿಸಿದ ಘಟನೆಯೊಂದು ವರದಿಯಾಗಿದೆ.
'ಬೈಬಲ್ ಅಥವಾ ಕುರಾನ್ -- ಯಾವುದು ಚೆನ್ನಾಗಿ ಉರಿಯುತ್ತದೆ?' ಎಂದು ಹೆಸರಿಸಲಾಗಿರುವ 12 ನಿಮಿಷಗಳ ಈ ವೀಡಿಯೋ ತುಣುಕನ್ನು ಅಲೆಕ್ಸ್ ಸ್ಟೀವರ್ಟ್ ಎಂಬ ನಾಸ್ತಿಕನೊಬ್ಬ 'ಯೂಟ್ಯೂಬ್'ನಲ್ಲಿ ಪೋಸ್ಟ್ ಮಾಡಿದ್ದಾನೆ.
ಕ್ರೈಸ್ತರ ಮತ್ತು ಮುಸ್ಲಿಮರ ಪವಿತ್ರ ಗ್ರಂಥಗಳ ಕೆಲವು ಪುಟಗಳನ್ನು ಹರಿದು ಬೆಂಕಿಗೆ ಹಾಕಿದ ನಂತರ ಅದರ ಧೂಮವನ್ನು ಸೇವಿಸುವ ದೃಶ್ಯಗಳು ಈ ವೀಡಿಯೋದಲ್ಲಿವೆ.
ಬೈಬಲ್‌ನಿಂದ ಹರಿಯಲಾದ ಪುಟಗಳು ಎಂದು ಹೇಳಲಾಗಿರುವ ಕಾಗದಗಳನ್ನು ಸುರುಳಿಯಾಗಿ ಮಾಡಿ ಅದಕ್ಕೆ ಬೆಂಕಿ ಹಚ್ಚಿ, ಅದರ ಧೂಮವನ್ನು ಸೇವಿಸುತ್ತಾ, 'ಪವಿತ್ರ' ಎಂದು ಹೇಳುವ ಈ ವೀಡಿಯೋವನ್ನು ಕಳೆದ ವಾರಾಂತ್ಯದಲ್ಲಿ ಇಂಟರ್ನೆಟ್‌ಗೆ ಅಪ್‌ಲೋಡ್ ಮಾಡಲಾಗಿತ್ತು. ಆದರೆ ಅದನ್ನು ಸಂಬಂಧಪಟ್ಟವರು ತಕ್ಷಣವೇ ಅಳಿಸಿ ಹಾಕಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಟೀವರ್ಟ್ ಕೆಲಸ ಮಾಡುತ್ತಿರುವ 'ಕ್ವೀನ್ಸ್‌ಲೆಂಡ್ ತಾಂತ್ರಿಕ ವಿಶ್ವವಿದ್ಯಾಲಯ'ವು, ಅನ್ವೇಷಣಾ ವಕೀಲರು ರಜೆಯಲ್ಲಿದ್ದಾರೆ ಎಂದಿದೆ.
ಆದರೆ ವಕೀಲನ ಕೃತ್ಯವನ್ನು ತೀವ್ರವಾಗಿ ಖಂಡಿಸಿದೆ. ವಕೀಲರು ಎಸಗಿರುವ ಕೃತ್ಯ ಸಂಶಯಾತೀತವಾಗಿ ನಮಗೆ ತೀವ್ರ ಅಸಮಾಧಾನ ಮತ್ತು ದುಃಖ ತಂದಿದೆ. ಇಂತಹ ಘಟನೆ ನಡೆಯಬಾರದಿತ್ತು ಎಂದು ಉಪ ಕುಲಪತಿ ಪೀಟರ್ ಕೊಲ್ಡ್ರಾಕ್ ತಿಳಿಸಿದ್ದಾರೆ.
ಬೈಬಲ್ ಮತ್ತು ಕುರಾನ್‌ಗಳು 'ಕೇವಲ ಪುಸ್ತಕಗಳಷ್ಟೇ' ಎಂದು ಬಣ್ಣಿಸಿರುವ ಸ್ಟೀವರ್ಟ್ ಕೃತ್ಯದಿಂದಾಗಿ ಮುಸ್ಲಿಮರಿಗೆ ಅಪಾರ ನೋವಾಗಿದೆ ಎಂದು ಆಸ್ಟ್ರೇಲಿಯಾದ ಇಸ್ಲಾಮಿಕ್ ಅಸೋಸಿಯೇಷನ್ ಅಧ್ಯಕ್ಷ ಶೇಖ್ ಮುಹಮ್ಮದ್ ವಾಹಿದ್ ಪ್ರತಿಕ್ರಿಯಿಸಿದ್ದಾರೆ.