ಅಲ್‌ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಮೊಮ್ಮಕ್ಕಳಿಗೆ ಜನ್ಮ ನೀಡಬೇಕಿದ್ದ ಬಾಡಿಗೆ ತಾಯಿಯೊಬ್ಬಳ ಮೇಲೆ ಸಿರಿಯಾದಲ್ಲಿ ನಡೆದ ದಾಳಿಯಿಂದಾಗಿ ಆಕೆಯ ಗರ್ಭದಲ್ಲಿದ್ದ ಅವಳಿ ಭ್ರೂಣಗಳು ಸಾವನ್ನಪ್ಪಿವೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
'ದಿ ಸನ್' ಪತ್ರಿಕೆಯ ಪ್ರಕಾರ ಒಸಾಮಾ ಬಿನ್ ಲಾಡೆನ್‌ನ 29ರ ಹರೆಯದ ಪುತ್ರ ಒಮರ್ ಮತ್ತು ತನ್ನ ಪರಿತ್ಯಜಿಸಲ್ಪಟ್ಟಿರುವ ಬ್ರಿಟೀಷ್ ಪತ್ನಿ ಜೈನಾ ಅವರು 24ರ ಹರೆಯದ ಬ್ರಿಸ್ಟಲ್ ನಿವಾಸಿ ಲೂಯಿಸ್ ಪೊಲಾರ್ಲ್ಡ್ ಅವರನ್ನು ಬಾಡಿಗೆಗೆ ಪಡೆದಿದ್ದರು.
10 ವಾರಗಳ ಗರ್ಭಿಣಿಯಾಗಿರುವ ಲೂಯಿಸ್ ಅವರು ಸಿರಿಯಾದಲ್ಲಿನ ಕೆಫೆಯೊಂದರಿಂದ ಮನೆಗೆ ಮರಳುತ್ತಿದ್ದ ವೇಳೆ ಆಕೆಯ ಮೇಲೆ ಇಬ್ಬರು ಪುರುಷರು ದಾಳಿ ನಡೆಸಿದ್ದರು. ಇದರ ನಂತರ ಮಾಜಿ ಪೋಲ್ ಡ್ಯಾನ್ಸರ್ ಆಗಿರುವ ಆಕೆ ಸಮೀಪ ಆಸ್ಪತ್ರೆಗೆ ಹೋಗಿದ್ದರಾದರೂ, ಭ್ರೂಣಗಳು ಸಾವನ್ನಪ್ಪಿವೆ ಎಂದು ವರದಿ ತಿಳಿಸಿದೆ.
ತನ್ನ ಮೇಲಿನ ದಾಳಿಯ ಹಿಂದಿನ ನಿರ್ದಿಷ್ಟ ಕಾರಣಗಳೇನು ಎಂಬುದು ತಿಳಿದಿಲ್ಲ ಎಂದು ಲೂಯಿಸ್ ತಿಳಿಸಿದ್ದಾಳೆ.
ಆದರೆ ಆಕೆ ಕುಖ್ಯಾತ ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಮೊಮ್ಮಕ್ಕಳಿಗೆ ಜನ್ಮ ನೀಡಲಿರುವ ವಿಚಾರ ಇಂಗ್ಲೆಂಡ್ ಹಾಗೂ ಜಗತ್ತಿನಾದ್ಯಂತ ಪ್ರಚಾರವಾಗಿತ್ತು. ಬಹುಶಃ ಇದೇ ಕಾರಣದಿಂದ ದಾಳಿ ನಡೆದಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಚೆಶೈರ್‌ನಲ್ಲಿನ 54ರ ಹರೆಯದ ಜೈನಾ, ಒಮರ್ ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿದ್ದಾನೆ ಎಂದು ಹೇಳಿ ದೂರವಾಗಿದ್ದಳು. ಜೇನ್ ಫಿಲಿಕ್ಸ್ ಬ್ರೌನ್ ಆಗಿದ್ದ ಆಕೆ ಒಮರ್‍ನನ್ನು ಮದುವೆಯಾದ ನಂತರ ಜೈನಾ ಆಗಿದ್ದಳು.
ಅವಳಿ ಮಕ್ಕಳಿಗೆ ಜನ್ಮ ನೀಡಿದ ನಂತರ ಒಮರ್ ಮತ್ತು ಜೈನಾ 10,000 ಬ್ರಿಟನ್ ಪೌಂಡ್ ಹಣವನ್ನು ಲೂಯಿಸ್‌ಳಿಗೆ ನೀಡಬೇಕಿತ್ತು.