ಬಾಂಗ್ಲಾ ಪ್ರಧಾನಮಂತ್ರಿ ಶೇಕ್ ಹಸೀನಾ ಅವರ ಜೀವಕ್ಕೆ ಅಪಾಯ ಇರುವುದಾಗಿ ಬಾಂಗ್ಲಾ ಮತ್ತು ವಿದೇಶ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದು, ಸೆಪ್ಟೆಂಬರ್, ನವೆಂಬರ್ ತಿಂಗಳಿನಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ವಿಮೋಚನಾ ವಿರೋಧಿ ಯುದ್ಧ ಪಡೆ, ಭಾರತೀಯ ಪ್ರತ್ಯೇಕತವಾದಿ ಸಂಘಟನೆ ಮತ್ತು ಸ್ಥಳೀಯ ವಿವಿಧ ಉಗ್ರಗಾಮಿ ಸಂಘಟನೆಗಳಿಂದ ಹಸೀನಾ ಜೀವಕ್ಕೆ ಅಪಾಯ ಇದೆ ಎಂದು ದಿ ಡೈಲಿ ಸ್ಟಾರ್ ವರದಿ ವಿವರಿಸಿದೆ.
ಸೆಪ್ಟೆಂಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಪ್ರಧಾನಿ ಹಸೀನಾ ಅವರ ಮೇಲೆ ದಾಳಿ ನಡೆಯುವ ಸಾಧ್ಯತೆ ಇರುವುದಾಗಿ ಬಾಂಗ್ಲಾ ಸೇರಿದಂತೆ ವಿವಿಧ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಈಗಾಗಲೇ ಹಸೀನಾ ಮೇಲೆ ದಾಳಿ ನಡೆಸಲು ಯತ್ನಿಸಲಾಗಿತ್ತು. ಅವರ ಜೀವಕ್ಕೆ ಯಾವತ್ತೂ ಅಪಾಯ ಇದ್ದಿರುವುದಾಗಿ ಪ್ರಧಾನಿಯ ವಿಶೇಷ ಸಹಾಯಕ ಮಹಬುಲ್ ಅಲಾಮ್ ಹನೀಫ್ ತಿಳಿಸಿದ್ದಾರೆ.
2008ರಲ್ಲಿ ಬಾಂಗ್ಲಾ ಸಂಸತ್ ಚುನಾವಣೆಯ ತಯಾರಿಯ ಸಂದರ್ಭದಲ್ಲಿಯೂ ಹಸೀನಾ ಅವರ ಜೀವಕ್ಕೆ ಅಪಾಯ ಇರುವುದಾಗಿ ಭಾರತೀಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.