ಸಾರ್ವಜನಿಕ ಸ್ಥಳ ಸೇರಿದಂತೆ ಇನ್ನಿತರ ತಾಣಗಳಲ್ಲಿ ಬುರ್ಖಾ ಧಾರಣೆ ನಿಷೇಧದ ಮಸೂದೆಯನ್ನು ಫ್ರಾನ್ಸ್ ಸೆನೆಟ್ ಮಂಗಳವಾರ ಅಂಗೀಕರಿಸಿದ್ದು, ಇದು ಫ್ರಾನ್ಸ್‌ನ ರಕ್ಷಣೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಫ್ರಾನ್ಸ್‌ನ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದಕ್ಕೆ ನಿಷೇಧ ಹೇರುವ ಮಸೂದೆಗೆ ಸಾಕಷ್ಟು ಪರ-ವಿರೋಧ ವ್ಯಕ್ತವಾಗಿತ್ತು. ಅಂತೂ ಕೊನೆಗೂ ಫ್ರಾನ್ಸ್ ಸೆನೆಟ್‌ನಲ್ಲಿ ಮಂಗಳವಾರ ಬುರ್ಖಾ ನಿಷೇಧ ಮಸೂದೆ 246 ಮತಗಳು ಪರವಾಗಿ ಬೀಳುವ ಮೂಲಕ ಅಂಗೀಕಾರವಾಗಿದೆ. ಈ ಮಸೂದೆ ಜುಲೈ ತಿಂಗಳಿನಲ್ಲಿ ನ್ಯಾಷನಲ್ ಅಸೆಂಬ್ಲಿಯ ಕೆಳಮನೆ(ಲೋವರ್ ಹೌಸ್)ಯಲ್ಲಿ ಅಂಗೀಕಾರವಾಗಿತ್ತು ಎಂದು ಸೆನಟ್ ಮೂಲಗಳು ಹೇಳಿವೆ.
ಫ್ರಾನ್ಸ್‌ನಲ್ಲಿ ಅತ್ಯಧಿಕವಾಗಿರುವ ಎರಡನೇ ದೊಡ್ಡ ಧರ್ಮವಾಗಿರುವ ಇಸ್ಲಾಮ್ ವಿರುದ್ಧವೇ ಸೆನಟ್‌ನಲ್ಲಿ ಬುರ್ಖಾ ನಿಷೇಧ ಮಸೂದೆ ಜಾರಿಗೊಳಿಸಿರುವ ಬಗ್ಗೆ ಬಹುತೇಕ ಮುಸ್ಲಿಮರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಧಾರ್ಮಿಕ ಅಸಮಾನತೆ ಹೆಚ್ಚಳವಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಆದರೆ ಫ್ರಾನ್ಸ್‌ನಲ್ಲಿ ಬುರ್ಖಾ ನಿಷೇಧ ಮಸೂದೆ ಜಾರಿಯಾಗಿರುವುದು ದೇಶದ ಸಾಂವಿಧಾನಿಕ ಮೌಲ್ಯವನ್ನು ಎತ್ತಿ ಹಿಡಿದಂತಾಗಿದೆ ಎಂದು ಸೆಕ್ಯುಲರ್ ಫೌಂಡೇಶನ್ ತಿಳಿಸಿದೆ.