ಬ್ರಿಟನ್: 'ಕನ್ಯತ್ವ' ಮಾರಾಟ ಜಾಲ-ಖದೀಮರು ಪೊಲೀಸ್ ಅತಿಥಿ!
ಲಂಡನ್, ಬುಧವಾರ, 15 ಸೆಪ್ಟೆಂಬರ್ 2010( 16:04 IST )
ವೇಶ್ಯಾವಾಟಿಕೆ ದಂಧೆಗಾಗಿ ಅಪ್ರಾಪ್ತ ಬಾಲಕಿಯರನ್ನು ಸಾಗಣೆ ಮಾಡುತ್ತಿದ್ದ ಜಾಲವೊಂದನ್ನು ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಪತ್ತೆ ಹಚ್ಚಿ ಸೆರೆ ಹಿಡಿಯುವ ಮೂಲಕ 'ಕನ್ಯತ್ವ' ಮಾರಾಟದ ಬೃಹತ್ ಜಾಲವನ್ನು ಬಯಲಿಗೆಳೆದಿರುವುದಾಗಿ ತಿಳಿಸಿದೆ.
ಐಶಾರಾಮಿ ಹೊಟೇಲ್ ಮಾಲೀಕರೊಬ್ಬರು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂರು ಮಂದಿ ಮಹಿಳೆಯರು ಹಾಗೂ ವ್ಯಕ್ತಿಯೊಬ್ಬ ಸೇರಿದಂತೆ ಅಪ್ರಾಪ್ತ ಬಾಲಕಿಯರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
'ನಾವು ಸುಂದರ ಯುವತಿಯರ ಸೇವೆ ಒದಗಿಸುತ್ತೇವೆ. ನನ್ನ ಬಳಿ 14ರಿಂದ 20ರ ಹರೆಯದ 12 ಮಂದಿ ಯುವತಿಯರಿದ್ದಾರೆ. ಅವರೆಲ್ಲ ಬ್ರಿಟನ್‌ನ ವಿವಿಧೆಡೆ ವಾಸವಾಗಿದ್ದಾರೆ. ಆದರೆ ಒಂದೆಡೆ ಇದ್ದು ಕನ್ಯತ್ವ ಮಾರಾಟ ಮಾಡಲು ನಮಗೆ ಬಾಡಿಗೆ ಮನೆ ಬೇಕಾಗಿದೆ. ಅದಕ್ಕೆ ಬೇಕಾದ ಹಣ ಹೂಡಲು ನಾನು ಸಿದ್ದಳಿದ್ದೇನೆ. ಅದಕ್ಕೆ ಬೇಕಾದ ಸೌಕರ್ಯ ಒದಗಿಸುತ್ತೀರಾ? ಎಂದು ಮಹಿಳೆಯೊಬ್ಬಳು ಸೆಂಟ್ರಲ್ ಲಂಡನ್‌ನ ನೈಟ್ಸ್‌ಬ್ರಿಡ್ಜ್‌ನಲ್ಲಿನ ಜುಮೈರಾ ಕಾರ್ಲ್ಟನ್ ಹೊಟೇಲ್ ಮಾಲೀಕರಿಗೆ ಕೈಬರಹದ ಪತ್ರವೊಂದನ್ನು ಬರೆದಿದ್ದಳು ಎಂದು ಡೈಲಿ ಮೇಲ್ ವರದಿ ವಿವರಿಸಿದೆ.
ಕನ್ಯತ್ವ ಮಾರಾಟದ ಜಾಲದ ಬಗ್ಗೆ ಜಾಗೃತರಾದ ಹೋಟೆಲ್ ಮಾಲೀಕರು, ಸಿಬ್ಬಂದಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಆಕೆ ಪತ್ರದಲ್ಲಿ ನೀಡಿದ್ದ ದೂರವಾಣಿ ಸಂಖ್ಯೆ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಫಾತೀಮಾ ಹಾಗ್‌ನೆಗಾಟ್ (24) ಮತ್ತು ಆಕೆಯ ಗಂಡ ರಾಸ್ಸೋಲ್ ಘೋಲಂಪೋರ್‌ನನ್ನು ಬಂಧಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯಾಚರಣೆ ಸಂದರ್ಭದಲ್ಲಿ ಗ್ರಾಹಕ ಸೋಗಿನಲ್ಲಿ ಹಾಗ್‌ನೆಗಾಟ್ ಚಿಕ್ಕಮ್ಮ ಮಾರೋಖ್ ಜಾಮಾಲಿ(41) ಜೊತೆ ಮಾತನಾಡಿದಾಗ, ನಿಮಗೆ ಅಗತ್ಯವಿದ್ದರೆ ಐದಾರು ಮಂದಿಗೆ ಹುಡುಗಿಯರನ್ನು ಕಳುಹಿಸುವುದಾಗಿ ತಿಳಿಸಿದ್ದಾಳೆಂದು ಡಿಟೆಕ್ಟೀವ್ ಕಾಮರಾನ್ ವಿವರಿಸಿದ್ದಾರೆ.
ಅಲ್ಲದೇ, ಇರಾನ್, ಇಂಗ್ಲೆಂಡ್ ಹಾಗೂ ಪೂರ್ವ ಯುರೋಪ್ ದೇಶದ 14ರಿಂದ 20ರ ಹರೆಯದ ಹುಡುಗಿಯರನ್ನು ಸರಬರಾಜು ಮಾಡುವುದಾಗಿಯೂ ಆಕೆ ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ತಾನು ಐದು ಹುಡುಗಿಯರನ್ನು ಕರೆತರುತ್ತೇನೆ. ಹಾಗೂ ಪ್ರತಿಯೊಬ್ಬರಿಗೂ 50,000ದಿಂದ 150,000 ಡಾಲರ್‌ವರೆಗೆ ನಿರೀಕ್ಷಿಸುತ್ತಿರುವುದಾಗಿಯೂ ಜಾಮಾಲಿ ಬೇಡಿಕೆ ಇಟ್ಟಿದ್ದಳು. ಒಟ್ಟಾರೆ ಇದೀಗ ಹಾಗ್‌ನೆಗಾಟ್, ಜಾಮಾಲಿ ಪೊಲೀಸರ ಅತಿಥಿಯಾಗಿದ್ದಾರೆ.