ವಿಶ್ವವಿಖ್ಯಾತ ಐಫೆಲ್ ಟವರ್‌ಗೆ ಬಾಂಬ್ ಇಟ್ಟಿರುವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಐಫೆಲ್ ಟವರ್ ಮತ್ತು ಪಾರ್ಕ್ ಸುತ್ತಮುತ್ತಲಿನ ಪ್ರವಾಸಿಗರನ್ನು ಹೊರ ಕಳುಹಿಸಿರುವುದಾಗಿ ಎಎಫ್‌ಪಿ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.
ಐಫೆಲ್ ಟವರ್ ಆಡಳಿತ ಮಂಡಳಿ ಬಾಂಬ್ ಇಟ್ಟಿರುವ ಬಗ್ಗೆ ಅನಾಮಧೇಯ ಬೆದರಿಕೆಯ ಕರೆಯೊಂದನ್ನು ಸ್ವೀಕರಿಸಿರುವುದಾಗಿ ಪ್ಯಾರಿಸ್ ಪೊಲೀಸರು ಎಎಫ್‌ಪಿಗೆ ಹೇಳಿದ್ದಾರೆ.
ಬಾಂಬ್ ಬೆದರಿಕೆ ಪರಿಣಾಮ ಐಫೆಲ್ ಟವರ್ ಪರಿಶೀಲನೆಗಾಗಿ ವಿಶೇಷ ಶೋಧ ತಂಡ, ಶ್ವಾನದಳ ತೆರಳಿದ್ದು, ಪ್ರತಿ ಮಹಡಿಯನ್ನು ಕೂಲಂಕಷವಾಗಿ ತಪಾಸಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಬ್ ಬೆದರಿಕೆಯ ಕರೆ ಬಂದ ಸಂದರ್ಭದಲ್ಲಿ ಐಫೆಲ್ ಟವರ್ ಹಾಗೂ ಸುತ್ತಮುತ್ತ ಸುಮಾರು 25 ಸಾವಿರ ಪ್ರವಾಸಿಗರಿದ್ದಿದ್ದರು. ಮುಂಜಾಗ್ರತಾ ಕ್ರಮದ ಅಂಗವಾಗಿ ಅವರೆಲ್ಲರನ್ನೂ ಹೊರಕಳುಹಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಇದೀಗ ಐಫೆಲ್ ಟವರ್ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.