ವಜ್ರಮುಷ್ಠಿ ಮತ್ತು ಜಿಹಾದಿ ಸಾಹಿತ್ಯಗಳು ಬ್ಯಾಗಿನಲ್ಲಿದ್ದವು ಎಂಬ ಕಾರಣಕ್ಕೆ ಅಮೆರಿಕಾದಲ್ಲಿ ಬಂಧಿತರಾಗಿದ್ದ ಭಾರತೀಯ ಚಿತ್ರ ನಿರ್ದೇಶಕ ವಿಜಯ್ ಕುಮಾರ್ ಅವರನ್ನು 'ಸ್ವಯಂಪ್ರೇರಿತ ನಿರ್ಗಮನ' ನಿಯಮದಡಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಹೌಸ್ಟನ್ ತೊರೆದಿದ್ದಾರೆ.
ಭಾರತ ಪ್ರಯಾಣ ಆರಂಭಿಸಿರುವ ವಿಜಯ್ ಕುಮಾರ್, ಕೆನಡಾ ಮೂಲಕ ತವರಿಗೆ ತಲುಪಲಿದ್ದಾರೆ ಎಂದು ವರದಿಗಳು ಹೇಳಿವೆ. ಇವರ ಬಿಡುಗಡೆಗೆ ಕೇಂದ್ರ ಸರಕಾರ ನಿರಾಸಕ್ತಿ ವಹಿಸಿತ್ತು ಎಂದು ಈ ಹಿಂದೆ ಆರೋಪಿಸಲಾಗಿತ್ತು.
ಇಸ್ಲಾಮಿಕ್ ಭಯೋತ್ಪಾದನೆಯ ಪ್ರಕಾರವಾದ 'ಜಿಹಾದ್' ವಿರುದ್ಧದ ಹಿಂದೂ ಕಾಂಗ್ರೆಸ್ ಸಮಾವೇಶಕ್ಕೆಂದು ಅಮೆರಿಕಾಕ್ಕೆ ತೆರಳಿದ್ದ ವಿಜಯ್ ಅವರನ್ನು ಹೌಸ್ಟನ್‌ನ ಜಾರ್ಜ್ ಬುಶ್ ಇಂಟರ್‌ಕಾಂಟಿನೆಂಟಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕಾ ಪೊಲೀಸರು ಬಂಧಿಸಿದ್ದರು.
40ರ ಹರೆಯದ ವಿಜಯ್ ಅವರ ಬ್ಯಾಗಿನಲ್ಲಿ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿದ್ದವು. ಇಸ್ಲಾಮಿಕ್ ಜಿಹಾದಿ ಸಾಹಿತ್ಯ, ವಜ್ರಮುಷ್ಠಿ (brass knuckles), ಬೇಹುಗಾರಿಕೆ ಮತ್ತು ಮಿಲಿಟರಿ ಶಸ್ತ್ರಾಸ್ತ್ರಗಳಿಗೆ ಸಂಬಂಧಪಟ್ಟ ನಕಾಶೆಗಳು ಮತ್ತು ಪುಸ್ತಕಗಳು, ನಾಸ್ತಿಕವಾದವನ್ನು ಪೋಷಿಸುವ ಸಾಹಿತ್ಯಗಳು ಅವರ ಬ್ಯಾಗಿನಲ್ಲಿದ್ದ ಕಾರಣದಿಂದ ಸಂಶಯಾಸ್ಪದ ನಡೆಯ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಅಮೆರಿಕಾ ಹೇಳಿಕೊಂಡಿತ್ತು.
ವಿಶ್ವದಲ್ಲಿ ವ್ಯಾಪಕವಾಗುತ್ತಿರುವ ಜಿಹಾದ್ ವಿರುದ್ಧ ಸಾಕ್ಷ್ಯಚಿತ್ರವನ್ನು ನಿರ್ಮಿಸಿರುವ ವಿಜಯ್, ಈ ಸಂಬಂಧ ಜಾಗೃತಿ ಮೂಡಿಸಲು ಅಮೆರಿಕಾಕ್ಕೆ ತೆರಳಿದ್ದರು. ಅವರನ್ನು ಆಗಸ್ಟ್ 26ರಂದು ಬಂಧಿಸಲಾಗಿತ್ತು.
ಅವರ ಬಿಡುಗಡೆಗೆ ಸಹಕರಿಸುವಂತೆ ವಿಜಯ್ ಕುಟುಂಬ ಮತ್ತು ಅವರ ಆಪ್ತರು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರಕ್ಕೆ ಪದೇ ಪದೇ ಮನವಿ ಸಲ್ಲಿಸಿದ್ದರೂ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತವು ನಿರ್ಲಕ್ಷ್ಯವಹಿಸಿತ್ತು ಎಂದು ಆರೋಪಿಸಲಾಗಿತ್ತು.
ಇದೀಗ ಅಮೆರಿಕಾವೇ ಬಿಡುಗಡೆ ಮಾಡುವುದರೊಂದಿಗೆ 20ಕ್ಕೂ ಹೆಚ್ಚು ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ವಿಜಯ್ ಮುಕ್ತಿ ಅನುಭವಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಅವರ ವಕೀಲ ರೋಜರ್ ಜೈನ್ ನಿರಾಕರಿಸಿದ್ದಾರೆ. ಆದರೆ ಅಮೆರಿಕಾ ತೊರೆದು, ಭಾರತಕ್ಕೆ ಹೊರಟಿದ್ದಾರೆ ಎಂಬುವುದನ್ನು ಖಚಿತಪಡಿಸಿದ್ದಾರೆ.
ಅಕ್ರಮವಾಗಿ ವಜ್ರಮುಷ್ಠಿಯನ್ನು (ಕೈಯ ನಾಲ್ಕು ಬೆರಳುಗಳಿಗೆ ತೊಡುವ ಲೋಹದ ಆಯುಧ) ಹೊಂದಿದ್ದ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿತ್ತು. ಇದಕ್ಕಾಗಿ ಅವರನ್ನು ಜೈಲಿಗಟ್ಟಲಾಗಿತ್ತು.