ಪಾಕಿಸ್ತಾನದಲ್ಲಿ ಇತ್ತೀಚೆಗೆ ಕ್ರಿಶ್ಚಿಯನ್ ಸಮುದಾಯದವರ ಮೇಲೆ ನಡೆದ ದಾಳಿಯ ಹಿಂದೆ ತಾಲಿಬಾನ್ ಮತ್ತು ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಗಳ ಕೈವಾಡ ಇರುವುದಾಗಿ ಇಲ್ಲಿಗೆ ಭೇಟಿ ನೀಡಿದ್ದ ಪಾಕ್ ಅಲ್ಪಸಂಖ್ಯಾತ ಹಕ್ಕುಗಳ ಸಚಿವ ಶಾಹಬಾಜ್ ಭಟ್ಟಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಮೇಲೆ ನಡೆದ ದಾಳಿಯ ಹಿಂದೆ ಪ್ರತ್ಯೇಕತವಾದಿಗಳು ಮತ್ತು ತಾಲಿಬಾನ್‌ನಂತಹ ವಿದೇಶಿ ಉಗ್ರಗಾಮಿ ಸಂಘಟನೆಗಳ ಕೈವಾಡ ಇರುವುದಾಗಿ ಶಂಕೆ ವ್ಯಕ್ತಪಡಿಸಿದರು.
ಈ ಎಲ್ಲಾ ಭಯೋತ್ಪಾದಕ ಸಂಘಟನೆಗಳು ದೇಶದ ಆಂತರಿಕ ಸಾಮರಸ್ಯವನ್ನು ನಾಶಗೊಳಿಸಲು ಯತ್ನಿಸುತ್ತಿರುವುದಾಗಿ ಈ ಸಂದರ್ಭದಲ್ಲಿ ದೂರಿದರು. ಖೈಬರ್ ಪಾಖ್ತುನ್‌ಖ್ವಾ ಪ್ರಾಂತ್ಯದಲ್ಲಿ ಕಳೆದ ಭಾನುವಾರ ಕ್ರಿಶ್ಚಿಯನ್ ಚರ್ಚ್ ಸಮೀಪ ಸಂಭವಿಸಿದ ಬಾಂಬ್ ಸ್ಫೋಟ ಘಟನೆಯಲ್ಲಿ ಪೊಲೀಸ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದರು.