ಇಸ್ಲಾಮಾಬಾದ್, ಗುರುವಾರ, 16 ಸೆಪ್ಟೆಂಬರ್ 2010( 13:25 IST )
ಬಲೂಚಿಸ್ತಾನ್ ಅನ್ನು ಅಭದ್ರಗೊಳಿಸಲು ಭಾರತ ಅಫ್ಘಾನಿಸ್ತಾನದ ನೆಲವನ್ನು ಉಪಯೋಗಿಸಿಕೊಂಡಿದೆ ಎಂಬ ವರದಿಯನ್ನು ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯ್ ತಳ್ಳಿಹಾಕಿದ್ದು, ದೇಶದ ನೆಲದಲ್ಲಿ ಪಾಕಿಸ್ತಾನದ ವಿರುದ್ಧ ವಿಧ್ವಂಸಕ ಕೃತ್ಯ ಚಟುವಟಿಕೆಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಲೂಚಿಸ್ತಾನದಲ್ಲಿನ ಬಂಡುಕೋರ ಚಟುವಟಿಕೆಯಲ್ಲಿ ಭಾರತ ಶಾಮೀಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕುವುದಾಗಿ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹಮೀದ್ ಕರ್ಜಾಯ್ ತಿಳಿಸಿದ್ದಾರೆ.
ಒಂದು ವೇಳೆ ಅಫ್ಘಾನ್ ನೆಲದಲ್ಲಿ ಭಾರತ ಬಲೂಚಿಸ್ತಾನದಲ್ಲಿನ ಬಂಡುಕೋರ ಚಟುವಟಿಕೆಯಲ್ಲಿ ಶಾಮೀಲಾಗಿದೆ ಎಂಬ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಇದ್ದರೆ ಪಾಕಿಸ್ತಾನ ಅದನ್ನು ಒದಗಿಸಲಿ ಎಂದು ಕರ್ಜಾಯ್ ಪಾಕಿಸ್ತಾನಕ್ಕೆ ಸವಾಲು ಹಾಕಿರುವುದಾಗಿ ದಿ ಡೈಲಿ ಟೈಮ್ಸ್ ವರದಿ ಹೇಳಿದೆ.
ಪಾಕ್ ವಿರುದ್ಧ ವಿಧ್ವಂಸಕ ಕೃತ್ಯ ನಡೆಸಬೇಕೆಂಬ ಬಯಕೆ ಅಫ್ಘಾನಿಸ್ತಾನಕ್ಕಿಲ್ಲ. ಆದರೆ ಪಾಕ್ ವಿರುದ್ಧ ಅಫ್ಘಾನ್ ನೆಲದಲ್ಲಿ ಭಾರತದ ಶಾಮೀಲಾತಿಯೊಂದಿಗೆ ಉಗ್ರಗಾಮಿ ಚಟುವಟಿಕೆ ನಡೆಯುತ್ತಿದೆ ಎಂಬ ಬಗ್ಗೆ ಯಾವುದೇ ಪುರಾವೆ ಇದ್ದರೂ ಪಾಕ್ ಅದನ್ನು ನೀಡಲಿ ಎಂದು ಕರ್ಜಾಯ್ ತಿಳಿಸಿದ್ದು, ಆ ನಿಟ್ಟಿನಲ್ಲಿ ಖಚಿತ ಮಾಹಿತಿ ಆಧಾರದ ಮೇಲೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜರ್ದಾರಿ ಜತೆಗಿನ ಜಂಟಿ ಮಾತುಕತೆ ವೇಳೆ ಕರ್ಜಾಯ್ ಈ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಉಭಯ ದೇಶಗಳು ರಕ್ಷಣೆ, ಭಯೋತ್ಪಾದನೆ ನಿಗ್ರಹ, ಆರ್ಥಿಕ, ವ್ಯಾಪಾರ ಮತ್ತು ಹೂಡಿಕೆ, ಮೂಲಭೂತ ಸೌಕರ್ಯಗಳ ಅನುಷ್ಠಾನ ಕುರಿತಂತೆ ಚರ್ಚೆ ನಡೆಸಿದವು.