ಗಲ್ಫ್ ದೇಶದಲ್ಲಿ ಭಿಕ್ಷಾಟನೆ ಕೂಡ ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಳ್ಳುತ್ತಿರುವ ಅಂಶ ಹೆಚ್ಚಿರುವುದನ್ನು ಇತ್ತೀಚೆಗಷ್ಟೇ ಪೊಲೀಸರು ಪತ್ತೆ ಹಚ್ಚಿದ್ದು, ಏಷ್ಯಾ ಮೂಲದ ಭಿಕ್ಷುಕನೊಬ್ಬ ದುಬೈ ಐಷಾರಾಮಿ ಹೊಟೇಲ್‌ವೊಂದರಲ್ಲಿ ವಾಸ್ತವ್ಯ ಹೂಡಿರುವುದನ್ನು ಕಂಡು ಹಿಡಿದಿದ್ದಾರೆ.
ದುಬೈನಲ್ಲಿ ಭಿಕ್ಷಾಟನೆ ನಡೆಸುತ್ತಿದ್ದ ಭಿಕ್ಷುಕನೊಬ್ಬ ಫೈವ್ ಸ್ಟಾರ್ ಹೋಟೆಲ್‌ವೊಂದರಲ್ಲಿ ವಾಸವಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಆತ ಇದೀಗ ಪೊಲೀಸರ ವಶದಲ್ಲಿರುವುದಾಗಿ ದುಬೈ ಪ್ರವಾಸೋದ್ಯಮ ಭದ್ರತೆಯ ನಿರ್ದೇಶಕ ಮೇಜರ್ ಮೊಹಮ್ಮದ್ ರಾಶಿದ್ ಅಲ್ ಮುಹೈರಿ ತಿಳಿಸಿದ್ದಾರೆ.
ಆದರೆ ಬಂಧಿತ ಏಷ್ಯಾದ ಭಿಕ್ಷುಕನ ಹೆಸರು ಮತ್ತು ಗುರುತಿನ ವಿವರ ನೀಡದ ಅವರು, ಈ ಮೊದಲು ಭಿಕ್ಷೆ ಬೇಡುತ್ತಿದ್ದ ಆ ವ್ಯಕ್ತಿಯನ್ನು ಗಡಿಪಾರು ಮಾಡಲಾಗಿತ್ತು. ಆದರೆ ಹೆಚ್ಚುವರಿ ಆದಾಯಕ್ಕಾಗಿ ಏಷ್ಯಾ ಮೂಲದ ಭಿಕ್ಷುಕ ಮತ್ತೆ ದುಬೈಗೆ ಆಗಮಿಸಿ ಭಿಕ್ಷಾಟನೆ ನಡೆಸಿ, ಐಶಾರಾಮಿ ಹೋಟೆಲ್‌ನಲ್ಲಿ ಕಾಲಕಳೆಯುತ್ತಿದ್ದ ಎಂದು ಖಾಲೀಜ್ ಟೈಮ್ಸ್ ವರದಿ ವಿವರಿಸಿದೆ.
ಪ್ರಸಕ್ತ ಸಾಲಿನ ರಂಜಾನ್ ಮತ್ತು ಈದ್ ಮಿಲಾದ್ ಸಂದರ್ಭದಲ್ಲಿ ದುಬೈ ನಗರದಲ್ಲಿ ಭಿಕ್ಷಾಟನೆಯನ್ನೇ ಲಾಭದಾಯಕ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಸುಮಾರು 360 ಮಂದಿಯನ್ನು ಸೆರೆ ಹಿಡಿದಿರುವುದಾಗಿ ಮೊಹಮ್ಮದ್ ತಿಳಿಸಿದ್ದಾರೆ. ಬಂಧಿತರಲ್ಲಿ ಬಹುತೇಕರು ಪ್ರವಾಸಿ ವೀಸಾದ ಮೂಲಕ ವಿದೇಶದಿಂದ ಆಗಮಿಸಿ ಭಿಕ್ಷಾಟನೆ ನಡೆಸುತ್ತಿದ್ದಾರೆಂದು ಅವರು ಈ ಸಂದರ್ಭದಲ್ಲಿ ಹೇಳಿದರು.