ವಾಷಿಂಗ್ಟನ್, ಗುರುವಾರ, 16 ಸೆಪ್ಟೆಂಬರ್ 2010( 17:21 IST )
ಚೀನಾವನ್ನು ವಿವಿಧ ತಂತ್ರಗಳ ಮೂಲಕ ಮಣಿಸಲು ಪಣ ತೊಟ್ಟಿರುವ ಅಮೆರಿಕಾ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸಂಸತ್ ಮತ್ತು ಹೋಮ್ಲೆಂಡ್ ಸೆಕ್ಯುರಿಟಿ ಇಲಾಖೆಯು ಅಮೆರಿಕಾದಲ್ಲಿ ಉತ್ಪಾದನೆಯಾದ ಸರಕುಗಳನ್ನು ಮಾತ್ರ ಖರೀದಿ ಮಾಡಬೇಕು ಎಂದು ನೂತನ ಮಸೂದೆಗಳನ್ನು ಸಂಸತ್ ಅಂಗೀಕರಿಸಿದೆ.
ಈ ಸಂಬಂಧ ಎರಡು ಮಸೂದೆಗಳನ್ನು ಸಂಸದರು ಮಂಡಿಸಿದ್ದು, ಸಂಸತ್ ಅಂಗೀಕಾರ ನೀಡಿದೆ. ಹಾಗಾಗಿ ಇನ್ನು ಮುಂದೆ ಸಂಸದರು ಅಧಿಕೃತವಾಗಿ ಸರಕಾರಿ ವೆಚ್ಚದಲ್ಲಿ ಯಾವುದೇ ವಸ್ತುಗಳನ್ನು ಖರೀದಿಸುವುದಿದ್ದರೂ, ಅದು ಅಮೆರಿಕಾ ನಿರ್ಮಿತವಾಗಿರಬೇಕಾಗಿರುವುದು ಕಡ್ಡಾಯವಾಗಿರುತ್ತದೆ.
ಸಂಸದೆ ಮರ್ಸಿ ಕಾಪ್ಟರ್ ಅವರು ಮೊದಲನೇ ಮಸೂದೆಯನ್ನು ಮಂಡಿಸಿದರು. ಸರಕು ಮತ್ತು ಸೇವೆಗಳನ್ನು ಪಡೆಯುವ ಸಂದರ್ಭದಲ್ಲಿ ಅದು ಅಮೆರಿಕಾ ನಿರ್ಮಿತವೇ ಆಗಿರಬೇಕು ಎಂಬ ಏಳು ದಶಕಗಳ ನಂತರದ ಮೊತ್ತ ಮೊದಲ ಮಸೂದೆಯನ್ನು ಕಾಪ್ಟರ್ ಪರಿಚಯಿಸಿದರು.
ಇದೇ ರೀತಿಯ ಮತ್ತೊಂದು ಮಸೂದೆಯನ್ನು ಮಂಡಿಸಿದ್ದು ಲ್ಯಾರಿ ಕಿಸ್ಸೆಲ್. ಹೋಮ್ಲೆಂಡ್ ಸೆಕ್ಯುರಿಟಿ ಇಲಾಖೆಯು ಬಟ್ಟೆ-ಬರೆ, ಟೆಂಟ್‌ಗಳು ಮತ್ತು ಇತರ ಬಳಕೆಯ ವಸ್ತುಗಳನ್ನು ಖರೀದಿಸುವಾಗಿ ಅದು ಕಡ್ಡಾಯವಾಗಿ ಅಮೆರಿಕಾ ನಿರ್ಮಿತವಾಗಿರಬೇಕು ಎಂಬ 'ಬೆರ್ರಿ' ಕಾಯ್ದೆಯನ್ನು ಮಂಡಿಸಿದರು.
ಇವೆರಡೂ ಮಸೂದೆಗಳಿಗೆ ಸದನವು ಒಮ್ಮತದ ಅಂಗೀಕಾರ ನೀಡಿತು. ಆ ಮೂಲಕ ನೌಕರಿ ಸೃಷ್ಟಿಯಲ್ಲಿ ಸ್ವಂತಿಕೆ ಮೆರೆಯಲು ಶತಯತ್ನ ನಡೆಸುತ್ತಿರುವ ಅಮೆರಿಕಾವು ಇದೀಗ ಉತ್ಪಾದನಾ ಕ್ಷೇತ್ರದಲ್ಲೂ ದೇಶೀ ತತ್ವಗಳನ್ನು ಸಾರುವ ಮಹತ್ವದ ಹೆಜ್ಜೆಯನ್ನಿತು.
ಕಾಯ್ದೆ ಜಾರಿಗೆ ಬಂದ ನಂತರ ಸಂಸತ್ ಮತ್ತು ಸಂಸದರು ಚೀನಾ ಅಥವಾ ಯಾವುದೇ ವಿದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಖರೀದಿಸುವಂತಿಲ್ಲ. ಕಡ್ಡಾಯವಾಗಿ ಅಮೆರಿಕಾದಲ್ಲಿ ತಯಾರಾಗುವ ವಸ್ತುಗಳನ್ನು ಮಾತ್ರ ಖರೀದಿಸಬೇಕಾಗುತ್ತದೆ.