ಅಫ್ಘಾನಿಸ್ತಾನದಲ್ಲಿ ಶನಿವಾರ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸುವಂತೆ ತಾಲಿಬಾನ್ ಗುರುವಾರ ಕರೆ ನೀಡಿದೆ.
'ಈ ಚುನಾವಣಾ ಪ್ರಕ್ರಿಯೆಯನ್ನು ನಮ್ಮ ಮುಸ್ಲಿಮ್ ದೇಶದ ಜನರು ಬಹಿಷ್ಕರಿಸಬೇಕೆಂದು ನಾವು ಕರೆ ನೀಡುತ್ತಿದ್ದೇವೆ. ಜಿಹಾದ್ ಹಾಗೂ ಇಸ್ಲಾಮಿಕ್ ಪ್ರಬಲ ಪ್ರತಿರೋಧದಿಂದ ವಿದೇಶಿ ದಾಳಿಕೋರರು ನಮ್ಮ ದೇಶದಿಂದ ಹೊರಹೋಗಬೇಕಾಗಿರುವುದು ಅತ್ಯಗತ್ಯವಾಗಿದೆ' ಎಂದು ಇ-ಮೇಲ್ ಸಂದೇಶದಲ್ಲಿ ಎಚ್ಚರಿಸಿದೆ.
ಶನಿವಾರ ಅಫ್ಘಾನಿಸ್ತಾನದಲ್ಲಿ ಸಂಸತ್ ಚುನಾವಣೆ ನಡೆಯಲಿದೆ. ಮತ್ತೊಂದೆಡೆ ಮತದಾನ ಬಹಿಷ್ಕರಿಸುವಂತೆ ತಾಲಿಬಾನ್ ಕರೆ ನೀಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಂಸತ್ ಚುನಾವಣೆಯಲ್ಲಿ ಅಫ್ಘಾನಿಸ್ತಾನಿಯರು ಮತದಾನ ಮಾಡುವ ಮೂಲಕ 249 ಸಂಸದರನ್ನು ಆಯ್ಕೆ ಮಾಡಲಿದ್ದಾರೆ ಎಂದು ವೋಲ್ಸೆ ಜಿಗ್ರಾ ತಿಳಿಸಿದ್ದಾರೆ.
34 ಕ್ಷೇತ್ರದಲ್ಲಿ ಸುಮಾರು 2,500ಕ್ಕೂ ಅಧಿಕ ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಏತನ್ಮಧ್ಯೆ ಮತದಾನ ಕೇಂದ್ರಗಳ ಮೇಲೆ ದಾಳಿ ನಡೆಸುವುದಾಗಿ ತಾಲಿಬಾನ್ ಎಚ್ಚರಿಕೆ ನೀಡಿದೆ. ಕಳೆದ ಒಂಬತ್ತು ವರ್ಷಗಳಿಂದ ಭಯೋತ್ಪಾದಕರು ಕಾಬೂಲ್ ಸರಕಾರದ ವಿರುದ್ಧ ಸಮರ ನಡೆಸುತ್ತಲೇ ಬಂದಿದ್ದಾರೆ.
ಎಚ್ಚರಿಕೆಯ ನಡುವೆಯೂ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಮೂರು ಮಂದಿ ಅಭ್ಯರ್ಥಿಗಳನ್ನು ತಾಲಿಬಾನ್ ಹತ್ಯೆಗೈದಿದೆ. ಆದರೆ ಉಗ್ರರ ಯಾವುದೇ ಬೆದರಿಕೆಗೆ ಜಗ್ಗುವ ಪ್ರಶ್ನೆಯೇ ಇಲ್ಲ. ಉಗ್ರರ ದಾಳಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸಾವಿರಾರು ಪೊಲೀಸರು ಹಾಗೂ ಅಮೆರಿಕ ಮತ್ತು ನ್ಯಾಟೋ ನೇತೃತ್ವದ ಮಿಲಿಟರಿ ಪಡೆಯನ್ನು ನಿಯೋಜಿಸಿರುವುದಾಗಿ ಅಫ್ಘಾನ್ ಆರ್ಮಿ ವರಿಷ್ಠ ಅಫ್ಜಲ್ ಅಮಾನ್ ತಿಳಿಸಿದ್ದಾರೆ.