ಪಾಕಿಸ್ತಾನದ ಮೂರನೇ ದೊಡ್ಡ ಪಕ್ಷವಾಗಿರುವ ಮುತ್ತಾಹಿದಾ ಖ್ವಾಮಿ ಚಳವಳಿ ಪಕ್ಷದ ಪ್ರಮುಖ ಸದಸ್ಯ ಇಮ್ರಾನ್ ಫಾರೂಕ್ ಅವರನ್ನು ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಲಂಡನ್ ಹೊರವಲಯದಲ್ಲಿ ಕಳೆದ ರಾತ್ರಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಲಂಡನ್‌ನ ಗ್ರೀನ್ ಲಾನ್ ಎಂಬಲ್ಲಿ ಫಾರೂಕ್ ಅವರನ್ನು ಚೂರಿಯಿಂದ ಇರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವುದಾಗಿ ಮೆಟ್ರೋಪೋಲಿಟನ್ ಪೊಲೀಸರು ವಿವರಿಸಿದ್ದಾರೆ.
ಫಾರೂಕ್ ಅವರ ಶವವನ್ನು ಏಷ್ಯನ್ ಮಾಲ್‌ನಲ್ಲಿ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಅವರಿಗೆ ಚಿಕಿತ್ಸೆ ನೀಡಲಾಯಿತಾದರೂ ಯಾವುದೇ ಪ್ರಯೋಜನವಾಗದೆ ಅವರು ಸಾವನ್ನಪ್ಪಿರುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾರನ್ನು ಬಂಧಿಸಲಾಗಿಲ್ಲ.
ಫಾರೂಕ್ ತಲೆತಪ್ಪಿಸಿಕೊಂಡ ಆರೋಪಿ ಎಂದು ಘೋಷಿಸಿದ್ದ ನಂತರ 1999ರಲ್ಲಿ ಬ್ರಿಟನ್‌ಗೆ ಪಲಾಯನಗೈದಿದ್ದರು. ಫಾರೂಕ್ ವಿರುದ್ಧ ಕೊಲೆ ಪ್ರಕರಣದ ಆರೋಪ ಹೊರಿಸಲಾಗಿತ್ತು.