ನೇಪಾಳ ಪ್ರಧಾನಿಗಾದಿ: ಚುನಾವಣಾ ಕಣದಿಂದ 'ಪ್ರಚಂಡ' ಹಿಂದಕ್ಕೆ
ಕಾಠ್ಮಂಡು, ಶುಕ್ರವಾರ, 17 ಸೆಪ್ಟೆಂಬರ್ 2010( 16:09 IST )
ನೇಪಾಳ ನೂತನ ಪ್ರಧಾನಿ ಆಯ್ಕೆಗಾಗಿ ಏಳು ಬಾರಿ ನಡೆದ ಚುನಾವಣೆಯಲ್ಲಿಯೂ ಮಾವೋ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ವಿಫಲರಾಗಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26ರಂದು ನಡೆಯುವ ಎಂಟನೇ ಸುತ್ತಿನ ಚುನಾವಣೆಯಲ್ಲಿ ಪ್ರಚಂಡ ಅವರನ್ನು ಕಣಕ್ಕಿಳಿಸುವುದಿಲ್ಲ ಎಂದು ಶುಕ್ರವಾರ ಮಾವೋ ಪಕ್ಷ ಸ್ಪಷ್ಟಪಡಿಸಿದೆ.
'ಪ್ರಧಾನಿ ಆಯ್ಕೆ ಕುರಿತಂತೆ ಇಂದು ಬೆಳಿಗ್ಗೆ ಪ್ರಧಾನಿ ಮಾಧವ್ ಕುಮಾರ್ ನೇಪಾಳ ಹಾಗೂ ಕಮ್ಯೂನಿಷ್ಟ್ ಪಾರ್ಟಿ ಆಫ್ ನೇಪಾಳ್-ಯೂನಿಫೈಡ್ ಮಾರ್ಕಿಸ್ಟ್ ಲೆನಿನಿಸ್ಟ್ ಪಕ್ಷದ ಮುಖಂಡರು ಮಾತುಕತೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬಂದಿರುವುದಾಗಿ' ಮಾವೋ ಪಕ್ಷದ ಸಂಸದ ನಾರಾಯಣ್ ಕಾಜಿ ಶ್ರೇಷ್ಠಾ ತಿಳಿಸಿದ್ದಾರೆ.
ಏತನ್ಮಧ್ಯೆ ಶ್ರೇಷ್ಠಾ ಅವರು ಪ್ರಚಂಡ ಹಾಗೂ ಮಾವೋ ಪಕ್ಷದ ಹಿರಿಯ ಮುಖಂಡರೊಂದಿಗಿನ ಮಾತುಕತೆಯಲ್ಲಿಯೂ ಪಾಲ್ಗೊಂಡಿದ್ದರು. ನೂತನ ಪ್ರಧಾನಿ ಆಯ್ಕೆಗಾಗಿ ನಡೆದ ಏಳು ಸುತ್ತಿನ ಚುನಾವಣೆಯಲ್ಲಿಯೂ ಮಾವೋ ಪಕ್ಷ ಸಫಲವಾಗಿಲ್ಲ ಎಂದು ಶ್ರೇಷ್ಠಾ ವಿವರಿಸಿದರು.
ಆ ನಿಟ್ಟಿನಲ್ಲಿ ನೂತನ ಸರಕಾರ ರಚನೆಗಾಗಿ ಪ್ರಚಂಡ ಅವರನ್ನು ಚುನಾವಣಾ ಕಣಕ್ಕೆ ಇಳಿಸದಿರಲು ಪಕ್ಷದ ಎಲ್ಲಾ ಮುಖಂಡರು ಒಮ್ಮತದಿಂದ ನಿರ್ಧರಿಸಿದ್ದು, ಸೆಪ್ಟೆಂಬರ್ 26ರಂದು ನಡೆಯಲಿರುವ ಚುನಾವಣೆಗೆ ಸುಗಮ ಹಾದಿ ಕಲ್ಪಿಸಿಕೊಡಲಾಗುವುದು ಎಂದರು.