ವಾಷಿಂಗ್ಟನ್, ಶುಕ್ರವಾರ, 17 ಸೆಪ್ಟೆಂಬರ್ 2010( 18:04 IST )
ಜಗತ್ತಿನ ದೊಡ್ಡಣ್ಣ ಎಂಬ ಹೆಸರು ಪಡೆದುಕೊಂಡು ತಾನು ಶ್ರೀಮಂತ ಎಂಬ ಪಟ್ಟದಲ್ಲಿರುವ ಅಮೆರಿಕಾದಲ್ಲಿ ಬಡತನವಿಲ್ಲ ಎಂಬ ಜನಸಾಮಾನ್ಯರ ಕಲ್ಪನೆ ಮತ್ತೊಮ್ಮೆ ಸುಳ್ಳಾಗಿದೆ. ಅಮೆರಿಕಾದಲ್ಲಿನ ಉದ್ಯೋಗ ನಿರತ ವಯಸ್ಸಿನ ಏಳು ಮಂದಿಯಲ್ಲಿ ಸರಾಸರಿ ಒಬ್ಬರು ಬಡತನದಿಂದ ಬಳಲುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.
ಕಳೆದ 50 ವರ್ಷಗಳ ಅವಧಿಯಲ್ಲೇ ಇದು ಅತೀ ಹೆಚ್ಚಿನ ಬಡತನ ಕಂಡು ಬಂದಿದೆ ಎಂದು ವರದಿಗಳು ಹೇಳಿವೆ. ಕಳೆದ ವರ್ಷ ಜಗತ್ತಿನಾದ್ಯಂತ ಕಾಣಿಸಿಕೊಂಡ ಆರ್ಥಿಕ ಹಿಂಜರಿತದಿಂದ ಅಮೆರಿಕಾದಲ್ಲೂ ಮಿಲಿಯನ್‌ಗಟ್ಟಲೆ ಮಂದಿ ಕೆಲಸ ಕಳೆದುಕೊಂಡಿದ್ದು, 1960ರ ನಂತರ ಕಂಡು ಬಂದಿರುವ ಅತಿ ಹೆಚ್ಚಿನ ಬಡತನ ಪ್ರಮಾಣವಿದು ಎಂದು ಹೇಳಲಾಗಿದೆ.
ಒಟ್ಟಾರೆ ಬಡತನ ಪ್ರಮಾಣವು ಶೇ.14.3ಕ್ಕೆ ಅಥವಾ 4.36 ಕೋಟಿ ಮಂದಿಗೆ ಏರಿಕೆಯಾಗಿದೆ ಎಂದು ಅಮೆರಿಕಾದ ಗಣತಿ ಇಲಾಖೆಯು ಗುರುವಾರ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಇದು 2009ರ ಸಾಲಿನ ಅಂದರೆ ಅಧ್ಯಕ್ಷರಾಗಿ ಬರಾಕ್ ಒಬಾಮಾ ಅಧಿಕಾರ ಸ್ವೀಕರಿಸಿದ ಮೊದಲನೇ ವರ್ಷದ ವರದಿಯಾಗಿದೆ.
2008ರಲ್ಲಿ ಬಡತನ ಪ್ರಮಾಣವು ಶೇ.13.2 ಅಥವಾ 3.98 ಕೋಟಿಯಲ್ಲಿತ್ತು.
ಆರೋಗ್ಯ ವಿಮೆ ಹೊಂದಿರದ ಅಮೆರಿಕನ್ನಡರ ಪ್ರಮಾಣವು ಶೇ.15.4ರಿಂದ ಶೇ.16.7ಕ್ಕೆ ಅಥವಾ 5.07 ಕೋಟಿಗೆ ಏರಿಕೆಯಾಗಿದೆ. ಜಾಗತಿಕ ಆರ್ಥಿಕ ಹಿಂಜರಿಕೆಯಿಂದಾಗಿ ನೌಕರಿ ಕಳೆದುಕೊಂಡಿದ್ದರಿಂದ ಆರೋಗ್ಯ ವಿಮೆಗಳನ್ನು ನೌಕರರು ಕಳೆದುಕೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಈ ಸಂಬಂಧ ಆರೋಗ್ಯ ವಿಮೆ ಹೊಂದಿಲ್ಲದವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇದೇ ವರ್ಷ ಸಂಸತ್ ನೂತನ ನೀತಿಯನ್ನು ಅಂಗೀಕರಿಸಿದೆಯಾದರೂ, ಇದು 2014ರೊಳಗೆ ಜಾರಿಗೆ ಬರುವುದು ಅಸಾಧ್ಯ.
18ರಿಂದ 65ರ ಹರೆಯದ ನಡುವಿನ ನೌಕರಿ ಮಾಡುವ ವಯಸ್ಸಿನ ವ್ಯಕ್ತಿಗಳ ಒಟ್ಟು ಸಂಖ್ಯೆಯಲ್ಲಿ ಸರಾಸರಿ ಬಡತನದ ಪ್ರಮಾಣವು ಶೇ.11.7ರಿಂದ 12.9ಕ್ಕೆ ಏರಿಕೆಯಾಗಿದೆ. ಇದು 1960ರ ನಂತರದ ಗರಿಷ್ಠ ಪ್ರಮಾಣ.
ಬಡತನದ ಪ್ರಮಾಣವು ಮಕ್ಕಳಲ್ಲಿ ಶೇ.19ರಿಂದ ಶೇ.20.7, ಹಿಸ್ಪಾನಿಕ್ ಜನಾಂಗದಲ್ಲಿ (ಸ್ಪೇನ್ ಅಮೆರಿಕನ್ನರು) ಶೇ.23.2ರಿಂದ ಶೇ.25.3, ಕರಿಯರಲ್ಲಿ ಶೇ.24.7ರಿಂದ ಶೇ.25.8 ಹಾಗೂ ಬಿಳಿಯರಲ್ಲಿ ಶೇ.8.6ರಿಂದ ಶೇ.9.4ಕ್ಕೆ ಹೆಚ್ಚಳ ಕಂಡಿದೆ.