ತಾಲಿಬಾನ್ ಉಗ್ರರ ಬೆದರಿಕೆಯ ನಡುವೆಯೂ ಬಿಗಿ ಬಂದೋಬಸ್ತ್‌ನಲ್ಲಿ ಅಫ್ಘಾನಿಸ್ತಾನದ ಇತಿಹಾಸದಲ್ಲೇ ಎರಡನೇ ಬಾರಿಗೆ ಅಲ್ಲಿನ ಸಂಸತ್ತಿಗೆ ಚುನಾವಣೆ ನಡೆಯುತ್ತಿದ್ದು, ಶನಿವಾರ ಬೆಳಿಗ್ಗೆ ಮತದಾನ ಆರಂಭವಾಗಿದೆ.
2009ರಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದ ನಂತರ ನಡೆಯುತ್ತಿರುವ ಪ್ರಥಮ ಚುನಾವಣೆ ಇದಾಗಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಮೋಸ ಎಸಗಲಾಗಿತ್ತು ಎಂಬ ಆರೋಪ ಕೂಡ ಆ ಸಂದರ್ಭದಲ್ಲಿ ಕೇಳಿ ಬಂದಿತ್ತು. ಅಫ್ಘಾನ್ ರಾಜಧಾನಿ ಕಾಬೂಲ್‌ನಾದ್ಯಂತ ಬಿಗಿ ಪೊಲೀಸ್ ಪಹರೆ ಏರ್ಪಡಿಸಲಾಗಿದೆ.
ಇಂದು ನಡೆಯುತ್ತಿರುವ ಮತದಾನದಲ್ಲಿ 249 ಸಂಸದರು ಆಯ್ಕೆಯಾಗಲಿದ್ದಾರೆ. ಶನಿವಾರ ನಡೆಯುತ್ತಿರುವ ಸಂಸತ್ ಚುನಾವಣೆ ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯ್ ನೇತೃತ್ವದ ಸರಕಾರಕ್ಕೆ ಅಗ್ನಿ ಪರೀಕ್ಷೆಯಾಗಿದೆ.
ಶನಿವಾರದ ಚುನಾವಣೆ ಪ್ರಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ತಾಲಿಬಾನ್ ಬೆದರಿಕೆ ಹಾಕಿತ್ತು. ಆ ಹಿನ್ನೆಲೆಯಲ್ಲಿ ಇದು ಅಫ್ಘಾನಿಸ್ತಾನದ ಅತಿ ಹಿಂಸಾತ್ಮಕ ದಿನವಾಗಲಿದೆ ಎಂದು ವಿಶ್ವಸಂಸ್ಥೆ ಆತಂಕವ್ಯಕ್ತಪಡಿಸಿದೆ. ಆದರೆ ಹಿಂಸಾಚಾರ ಅಫ್ಘಾನ್ ಚುನಾವಣಾ ಪ್ರಕ್ರಿಯೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜನರು ಮತದಾನ ಮಾಡುವ ಮೂಲಕ ತಮ್ಮ ಪ್ರತಿನಿಧಿಗಳನ್ನು ಆರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ತಾಲಿಬಾನ್ ಬೆದರಿಕೆ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇಂದಿನ ಚುನಾವಣೆಯಲ್ಲಿ ಸುಮಾರು 2,500 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.