ಭಾರತೀಯ ಸೇನಾಪಡೆಗಳು ಜಮ್ಮು-ಕಾಶ್ಮೀರದಲ್ಲಿ ಅಮಾನವೀಯ ಕೃತ್ಯಗಳನ್ನು ಎಸಗುತ್ತಿವೆ ಎಂದು ಆರೋಪಿಸಿರುವ ಜಮಾತ್ ಉದ್ ದಾವಾ ಸಂಘಟನೆಯು ಶುಕ್ರವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಹಲವು ನಗರಗಳಲ್ಲಿ ಪ್ರತಿಭಟನೆ ನಡೆಸಿದ್ದು, ಪಾಕ್ ಸರಕಾರ 'ಮೌನ ವೀಕ್ಷಕ'ನಾಗಿರುವುದಕ್ಕೆ ತೀವ್ರವಾಗಿ ಟೀಕಿಸಿದೆ.
ಪಂಜಾಬ್ ರಾಜಧಾನಿ ಲಾಹೋರ್‌ನಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 5,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಬ್ಯಾನರುಗಳು ಮತ್ತು ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದ ಪ್ರತಿಭಟನಾಕಾರರು ಜಮಾತ್ ಉದ್ ದಾವಾದ ಚೌಬುರ್ಜಿ ಪ್ರದೇಶದಲ್ಲಿನ ಪ್ರಧಾನ ಕಚೇರಿಯಿಂದ ರ‌್ಯಾಲಿ ಆರಂಭಿಸಿದರು.
ಅಮಾಯಕ ಕಾಶ್ಮೀರಿಗಳನ್ನು ಕೊಲ್ಲುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಮ್ಮ ರ‌್ಯಾಲಿಯುದ್ದಕ್ಕೂ ಭಾರತ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಭೆಯಲ್ಲಿ ಮಾತನಾಡಿದ 'ಟೆಹ್ರಿಕ್ ಇ ಆಜಾದಿ ಜಮ್ಮು ಕಾಶ್ಮೀರ್' ಅಧ್ಯಕ್ಷ ಹಫೀಜ್ ಸೈಫುಲ್ಲಾ ಮನ್ಸೂರ್, ಪ್ರತಿಭಟನಾಕಾರರು ಕಾಶ್ಮೀರಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಯಾವುದಕ್ಕೂ ಸಿದ್ಧರಾಗಿರಬೇಕು, ಆ ಪ್ರದೇಶವನ್ನು ಸ್ವತಂತ್ರಗೊಳಿಸಲು ನಾವು ಬದ್ಧರಾಗಿರಬೇಕು ಎಂದು ಕರೆ ನೀಡಿದ್ದಾನೆ.
ಕಾಶ್ಮೀರಿಗಳು ಮತ್ತು ಪಾಕಿಸ್ತಾನಿಗಳ ರಕ್ತ ಬೇರೆಯಲ್ಲ, ನಾವೆಲ್ಲರೂ ಒಂದೇ. ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನ ಸರಕಾರ ಏನೂ ಮಾಡದಿದ್ದರೆ, ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಅಲ್ಲಿ ಹೆಚ್ಚಿನ ಒತ್ತಡ ಸೃಷ್ಟಿಯಾಗದು. ಸರಕಾರ ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದನು.
ಜಮಾತ್ ಉದ್ ದಾವಾದ ಅಗ್ರ ನಾಯಕ ಅಮೀರ್ ಹಂಝ ಕೂಡ ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದಾನೆ. ಕಾಶ್ಮೀರದಲ್ಲಿನ ಸ್ವಾತಂತ್ರ್ಯ ಹೋರಾಟವನ್ನು ದಮನ ಮಾಡುವಲ್ಲಿ ಭಾರತದ ಎಂಟು ಲಕ್ಷ ಯೋಧರು ವಿಫಲರಾಗಿದ್ದಾರೆ; ಕಾಶ್ಮೀರದಿಂದ ಭಾರತವು ಸೇನೆಯನ್ನು ಹಿಂದಕ್ಕೆ ಪಡೆದುಕೊಳ್ಳದೆ ಇದ್ದರೆ ಅದು ಭಾರತದ ಗೋರಿಯಾಗಲಿದೆ. ಕಾಶ್ಮೀರಿಗಳಿಗೆ ನೀಡಬೇಕಾದ ಸ್ವತಂತ್ರವನ್ನು ಇನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾನೆ.