ಇದೇ ತಿಂಗಳ ಆರಂಭದಲ್ಲಿ ಶ್ವೇತಭವನದಲ್ಲಿ ನಡೆದ ಮಧ್ಯಪ್ರಾಚ್ಯ ನಾಯಕ ಜತೆಗಿನ ಐತಿಹಾಸಿಕ ಶಾಂತಿ ಮಾತುಕತೆಯ ಸಂದರ್ಭದಲ್ಲಿ ಇತರ ನಾಯಕರ ಜತೆ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ನಿಂತಿರುವ ನಕಲಿ ಚಿತ್ರವನ್ನು ಈಜಿಪ್ಟ್‌ನ ಸರಕಾರಿ ಪತ್ರಿಕೆಯೊಂದು ಪ್ರಕಟಿಸುವ ಮೂಲಕ ತೀವ್ರ ವಿವಾದಕ್ಕೀಡಾಗಿದೆ.
ಈಜಿಪ್ಟ್ ಅಧ್ಯಕ್ಷ ಹಾನ್ಸಿ ಮುಬಾರಕ್, ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತಾನ್ಯಾಹು, ಜೋರ್ಡಾನ್ ದೊರೆ ಎರಡನೇ ಅಬ್ದುಲ್ಲಾ, ಪ್ಯಾಲಿಸ್ತೇನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರನ್ನು ಶ್ವೇತಭವನದ ಕೆಂಪು ಹಾಸಿನಲ್ಲಿ ಒಬಾಮಾ ಮುನ್ನಡೆಸುತ್ತಿರುವ ಚಿತ್ರವನ್ನು ತೆಗೆಯಲಾಗಿತ್ತು.
PR
ಆದರೆ ಪತ್ರಿಕೆಯು ಇದನ್ನು ಪ್ರಕಟಿಸುವ ಸಂದರ್ಭದಲ್ಲಿ ತಿರುಚಿದೆ. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಚಿತ್ರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಎಲ್ಲರಿಗಿಂತ ಮುಂದುಗಡೆಯಿದ್ದ ಒಬಾಮಾರನ್ನು ಹಿಂದಕ್ಕೆ ತಳ್ಳಿ, ಈಜಿಪ್ಟ್ ಅಧ್ಯಕ್ಷ ಮುಬಾರಕ್ ಅವರು ಎದುರುಗಡೆ ಸಾಗುತ್ತಿರುವ ಚಿತ್ರವನ್ನು ಈಜಿಪ್ಟ್‌ನ ಸರಕಾರಿ ಪತ್ರಿಕೆ 'ಅಲ್-ಅಹ್ರಮ್' ಪ್ರಕಟಿಸಿದೆ.
ಪತ್ರಿಕೆಯು ತಿದ್ದುಪಡಿ ಮಾಡಿದ ಚಿತ್ರವನ್ನು ಪ್ರಕಟಿಸುತ್ತಿದ್ದಂತೆ ಮೂಲ ಚಿತ್ರವನ್ನು ಶ್ವೇತಭವನದ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಮೂಲ ಚಿತ್ರದ ಪ್ರಕಾರ ಮುಬಾರಕ್ ಅವರು ಎಡಗಡೆಯಿಂದ ಮೊದಲನೆಯವರಾಗಿ ನಡೆದು ಬರುತ್ತಿದ್ದಾರೆ. ತಿದ್ದುಪಡಿ ಮಾಡಲಾದ ಚಿತ್ರದಲ್ಲಿ ಅವರು ನಡುವಿನಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಮೂಲ ಚಿತ್ರದಲ್ಲಿ ಎಡಗಡೆಯಿಂದ ಮೂರನೆಯವರಾಗಿ ಎಲ್ಲರಿಗಿಂತ ಮುಂದಿದ್ದ ಒಬಾಮಾ ಅವರನ್ನು ಮಾರ್ಪಾಡುಗೊಳಿಸಲಾದ ಚಿತ್ರದಲ್ಲಿ ಎಡಗಡೆಯಿಂದ ಎರಡನೇಯವರಾಗಿ ಹಿಂದಿಕ್ಕಲಾಗಿದೆ.
ಇಷ್ಟೇ ಅಲ್ಲದೆ ಇತರ ನಾಯಕರ ತಲೆ ಮತ್ತು ದೇಹಗಳ ಚಿತ್ರಗಳನ್ನು ಕೂಡ ಫ್ಲಿಪ್ ಮಾಡಲಾಗಿದೆ.
ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಪತ್ರಿಕೆಯು, ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಶಾಂತಿ ಮಾತುಕತೆಯಲ್ಲಿ ಮುಬಾರಕ್ ಅವರ ಪಾತ್ರವನ್ನು ಅರ್ಥಪೂರ್ಣವನ್ನಾಗಿಸಲು ತಾನು ಈ ರೀತಿ ಮಾಡಿರುವುದಾಗಿ ಪತ್ರಿಕೆ ಹೇಳಿದೆ.