ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಶ್ರೀಲಂಕಾ ಆರ್ಮಿಯ ಮಾಜಿ ವರಿಷ್ಠ ಸರತ್ ಫೋನ್ಸೆಕಾ ಅವರಿಗೆ ಎರಡನೇ ಕೋರ್ಟ್ ಮಾರ್ಷಲ್‌ನಲ್ಲಿ ಶುಕ್ರವಾರ ಮೂರು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ. ಈಗಾಗಲೇ ಫೋನ್ಸೆಕಾ ಅವರ ಮಿಲಿಟರಿ ರಾಂಕ್, ಮೆಡಲ್ಸ್‌ಗಳನ್ನು ವಾಪಸ್ ಪಡೆಯಲಾಗಿತ್ತು.
ಕಳೆದ ವರ್ಷ ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಳಂ ವಿರುದ್ಧ ಮಿಲಿಟರಿ ಹೋರಾಟದ ಹೀರೋ ಆಗಿದ್ದ ಫೋನ್ಸೆಕಾ ಇದೀಗ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಶುಕ್ರವಾರ ರಕ್ಷಣಾ ಒಪ್ಪಂದಕ್ಕೆ ಸಂಬಂಧಿಸಿದಂತೆ ನಡೆದ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯಲ್ಲಿ ಫೋನ್ಸೆಕಾ ದೋಷಿ ಎಂಬುದು ಸಾಬೀತಾಗಿತ್ತು ಎಂದು ಮೂಲಗಳು ತಿಳಿಸಿವೆ.
ಎರಡನೇ ಕೋರ್ಟ್ ಮಾರ್ಷಲ್, ಫೋನ್ಸೆಕಾಗೆ ಮೂರು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ಶಿಕ್ಷೆಯಯನ್ನು ಜಾರಿಗೊಳಿಸಲು ಲಂಕಾ ಅಧ್ಯಕ್ಷರಿಗೆ ಶಿಫಾರಸು ಮಾಡಿದೆ. ಮಿಲಿಟರಿ ಪಡೆಯ ವರಿಷ್ಠರಾಗಿರುವ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರ ಅಂಕಿತಕ್ಕಾಗಿ ಶಿಫಾರಸ್ಸನ್ನು ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಅಧ್ಯಕ್ಷರ ಅಂಕಿತದ ನಂತರವೇ ಫೋನ್ಸೆಕಾ ಶಿಕ್ಷೆಯನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ. ನಂತರ ಶಿಕ್ಷೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.