ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ.. ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ.. -- ಇದು ನಿಜಕ್ಕೂ ಚಾಲ್ತಿಯಲ್ಲಿರುವ ದಿನಗಳಿವು. ಆದರೆ ಮೈಪೂರ್ತಿ ಮುಚ್ಚಿಕೊಳ್ಳಲೂ ಬಟ್ಟೆಯೇ ಬೇಕಿಲ್ಲ, ಪೈಂಟ್ ಬಳಿದುಕೊಂಡರೂ ಸಾಕೆಂದು ನೂತನ ಸಂಶೋಧನೆಯೊಂದು ಹೇಳಿದೆ.
ಮಾನ ಮುಚ್ಚುವ ವಸ್ತ್ರೇತರ ಪ್ರಕಾರಕ್ಕೆ 'ಫ್ಯಾಬ್ರಿಕನ್ ಸ್ಪ್ರೇ' ಎಂದು ಹೆಸರಿಡಲಾಗಿದೆ. ಇಲ್ಲಿ ಬಟ್ಟೆ ಧರಿಸುವ ಬದಲು ಮೈಗೆ ಪೈಂಟ್ ಸ್ಪ್ರೇ ಮಾಡಲಾಗುತ್ತದೆ. ಸ್ವಲ್ಪವೇ ಹೊತ್ತಿನಲ್ಲಿ ಅದು ಘನೀಕೃತ ಸ್ಥಿತಿಗೆ ತಲುಪಿ ಬಟ್ಟೆಯಂತೆಯೇ ಕಂಗೊಳಿಸುತ್ತದೆ.
ಇದನ್ನು ಸಿದ್ಧಪಡಿಸಿರುವುದು ಲಂಡನ್ ಇಂಪೀರಿಯಲ್ ಕಾಲೇಜಿನ ಸ್ಪಾನಿಷ್ ವಿನ್ಯಾಸಕಾರ ಡಾ. ಮಾನೆಲ್ ಟಾರೆಸ್ ಮತ್ತು ರಾಯಲ್ ಕಲಾ ವಿಶ್ವವಿದ್ಯಾಲಯ. ಇಂದು ಧರಿಸಿದ ಬಟ್ಟೆಯನ್ನು ನಾಳೆ ಧರಿಸದ ಪೀಳಿಗೆಗೆ ಇದು ಹೇಳಿ ಮಾಡಿಸಿದ ಪ್ರಕಾರ ಎಂದೂ ಸಂಶೋಧಕರು ಹೇಳಿಕೊಂಡಿದ್ದಾರೆ.
ಹಾಗೆಂದು ಈ ಫ್ಯಾಬ್ರಿಕನ್ ಸ್ಪ್ರೇಯಿಂದ ಮೈಗಂಟಿಕೊಂಡ ಬಟ್ಟೆಯನ್ನು ಮರುದಿನ ಬಳಕೆ ಮಾಡಬಾರದೆಂದೇನೂ ಇಲ್ಲ. ಇದನ್ನು ಒಗೆಯಬಹುದು, ಅಲ್ಲದೆ ಮರು ಬಳಕೆಯೂ ಮಾಡಬಹುದು.
ಪಾಲಿಮಾರ್ ತಂತ್ರಜ್ಞಾನದಿಂದ ನೊರೆಯ ರೀತಿಯ ದ್ರಾವಣವನ್ನು ಸಿದ್ಧಪಡಿಸಿ, ಯಾವ ರೀತಿಯ ಬಟ್ಟೆ ಬೇಕೋ ಆ ಮಾದರಿಯ ಸ್ಪ್ರೇಯನ್ನು ಮಾಡಬಹುದಾಗಿದೆ. ಅದನ್ನು ದೇಹದ ಮೇಲೆ ಸಿಂಪಡಿಸಿ ಸ್ವಲ್ಪ ಹೊತ್ತು ಒಣಗಲು ಬಿಟ್ಟಲ್ಲಿ ಮೈಗೆ ಅಂಟಿಕೊಳ್ಳುವ, ಸುಕ್ಕುಗಳಿಲ್ಲದ ಬಟ್ಟೆ ರೆಡಿ.
ಇದನ್ನು ಬಳಕೆ ಮಾಡುವವರಿಗೆ ಹೊಲಿಗೆ ಯಂತ್ರ, ಟೈಲರ್ ಕಿರಿಕಿರಿ, ಟೈಟು-ಲೂಸು ಮುಂತಾದ ಸಮಸ್ಯೆಗಳೇ ಇಲ್ಲ. ಇಡೀ ದೇಹವನ್ನು ಆವರಿಸುವಂತೆ ಯಾವುದೇ ರೀತಿಯಲ್ಲಿ ಸಿಂಪಡಿಸಿ, ಬೇಕಾದ ಬಣ್ಣದ ದಿರಿಸನ್ನು ಕ್ಷಣ ಮಾತ್ರದಲ್ಲಿ ಸೃಷ್ಟಿಸಿಕೊಳ್ಳಬಹುದಾಗಿದೆ.
ಈಗಾಗಲೇ ಹಲವು ರೂಪದರ್ಶಿಯರ ನುಣುಪಾದ ದೇಹಗಳಿಗೆ ಫ್ಯಾಬ್ರಿಕನ್ ಸ್ಪ್ರೇಯನ್ನು ಸಿಂಪಡಿಸಿ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಲಾಗಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ವೈದ್ಯಕೀಯ, ಫ್ಯಾಶನ್ ಮುಂತಾದ ಯಾವುದೇ ಸೇವೆಗಳಿಗೆ ಇದನ್ನು ಬಳಸಬಹುದು ಎಂದು ವಿನ್ಯಾಸಕಾರರು ತಿಳಿಸಿದ್ದಾರೆ.
ಇದರಲ್ಲಿ ಕಂಡು ಬಂದಿರುವ ಏಕೈಕ ಹಿನ್ನಡೆಯೆಂದರೆ ಈ ಸ್ಪ್ರೇಯನ್ನು ಸ್ವತಃ ಮಾಡಿಕೊಳ್ಳಲು ಸಾಧ್ಯವಿಲ್ಲ. ಇನ್ನೊಬ್ಬರ ಸಹಾಯ ಅಗತ್ಯವಾಗಿರುತ್ತದೆ. ಬಟ್ಟೆ ಹಾಕಿಕೊಂಡಂತೆ ಖಾಸಗಿತನವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.