ಗಿಲಾನಿ ಮನೆ ಎದುರೇ ಬೆಂಕಿ ಹಚ್ಕೊಂಡು ವ್ಯಕ್ತಿ ಸಾವಿಗೆ ಶರಣು
ಇಸ್ಲಾಮಾಬಾದ್, ಸೋಮವಾರ, 20 ಸೆಪ್ಟೆಂಬರ್ 2010( 16:41 IST )
ಪಾಕಿಸ್ತಾನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರ ಮನೆಯ ಎದುರೇ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡ ಪರಿಣಾಮ ಒಂದು ದಿನಗಳ ಕಾಲ ಸಾವು-ಬದುಕಿನ ಹೋರಾಟ ನಡೆಸಿ ಸೋಮವಾರ ಕೊನೆಯುಸಿರೆಳೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಅಧಿಕಾರಿಗಳು ತನ್ನ ಅಹವಾಲನ್ನು ಸ್ವೀಕರಿಸಿಲ್ಲ ಎಂದು ಆರೋಪಿಸಿ ಮೊಹಮ್ಮದ್ ಅಕ್ರಮ್ ಎಂಬಾತ ಮುಲ್ತಾನ್‌ನಲ್ಲಿ ಗಿಲಾನಿ ಅವರ ಮನೆಯ ಮುಂಭಾಗವೇ ಬೆಂಕಿ ಹಚ್ಚಿಕೊಂಡು ಪ್ರತಿಭಟಿಸಿರುವುದಾಗಿ ಆನ್‌ಲೈನ್ ನ್ಯೂಸ್ ಏಜೆನ್ಸಿಯ ವರದಿ ವಿವರಿಸಿದೆ.
ಅಕ್ರಮ್ ಬೆಂಕಿಹಚ್ಚಿಕೊಂಡ ಕೂಡಲೇ ಸುತ್ತಮುತ್ತಲ ಮನೆಯವರು ಆತ ಹಚ್ಚಿಕೊಂಡಿದ್ದ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದ್ದರು. ಆದರೆ ಅಷ್ಟರಲ್ಲೇ ಬೆಂಕಿಯಲ್ಲಿ ಅಕ್ರಮ್ ಬೆಂದು ಹೋಗಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅಕ್ರಮ್ ಸೋಮವಾರ ಬೆಳಿಗ್ಗೆ ಸಾವನ್ನಪ್ಪಿದ್ದ.
ನಿರುದ್ಯೋಗಿಯಾಗಿದ್ದ ಅಕ್ರಮ್ ಕೆಲಸಕ್ಕಾಗಿ ಎಲ್ಲೆಡೆ ಅರ್ಜಿ ಗುಜರಾಯಿಸುತ್ತಿದ್ದ. ಆತನ ದುರಾದೃಷ್ಟ ಅದಕ್ಕೆ ಯಾವುದೇ ಪ್ರತಿಕ್ರಿಯೆಯೇ ಬರುತ್ತಿರಲಿಲ್ಲವಾಗಿತ್ತು. ಅಷ್ಟೇ ಅಲ್ಲ ಆತ ನೌಕರಿ ಪಡೆಯಲು ಹಲವು ಬಾರಿ ರಾಜಕಾರಣಿಗಳನ್ನು ಭೇಟಿಯಾಗಲು ಪ್ರಯತ್ನಿಸಿ ವಿಫಲನಾಗಿದ್ದ. ಇದರಿಂದಾಗಿ ಆತ ಹತಾಶನಾಗಿರುವುದಾಗಿ ಅಕ್ರಮ್ ಸಂಬಂಧಿಗಳು ವಿವರಿಸಿದ್ದಾರೆ.
ಆತನ ಸಂಕಷ್ಟಕ್ಕೆ ಬೇರೆ ಆಯ್ಕೆಯೇ ಇರಲಿಲ್ಲವಾಗಿತ್ತು. ಆ ನಿಟ್ಟಿನಲ್ಲಿ ಆತ ಪ್ರಧಾನಿಯ ನಿವಾಸದ ಮುಂಭಾಗವೇ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವುದಾಗಿ ಅಕ್ರಮ್ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.