ಅಮೆರಿಕಾದ ಪರಿಪೂರ್ಣ ಯುವತಿ ಸ್ಪರ್ಧೆಯಲ್ಲಿ ಭಾರತ ಮೂಲದ ಅನ್ಯಾಷಾ ಪನೇಸರ್ ಎಂಬ 16ರ ಬಾಲಕಿ ವಿಜಯಿಯಾಗಿದ್ದಾಳೆ. ಆಕೆಯನ್ನು ಅಮೆರಿಕಾದ ಯುವರಾಣಿ ಎಂಬ ಬಿರುದು ನೀಡಿ ಗೌರವಿಸಲಾಗಿದೆ.
ಆದರೆ ಈಕೆಯ ಸ್ಪರ್ಧೆಗೆ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಅದಕ್ಕೆ ಕಾರಣ ಪನೇಸರ್ ಬ್ರಿಟೀಷಳಾಗಿದ್ದುದು. ಫ್ಲೋರಿಡಾದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಆತಿಥೇಯ ಅಮೆರಿಕಾ ಸುಂದರಿಯರನ್ನು ಹಿಂದಿಕ್ಕಿ ವೇಲ್ಸ್‌ನ ಹುಡುಗಿ 'ಪರ್ಫೆಕ್ಟ್ ಟೀನ್' ಪಟ್ಟಕ್ಕೇರಿದಾಗ ಹಲವರು ಅಸಮಾಧಾನ ವ್ಯಕ್ತಪಡಿಸಿದರು.
2,000 ಅಮೆರಿಕನ್ ಡಾಲರ್ ಬಹುಮಾನ ಹಾಗೂ ಟಿವಿ ಪ್ರಸಾರಕಿಯಾಗಲು ನೀಡುವ 18,000 ಅಮೆರಿಕನ್ ಡಾಲರ್ ಶಿಷ್ಯವೇತನ ಹೊಂದಿರುವ ಸ್ಪರ್ಧೆಯಲ್ಲಿ ಆಯೋಜಕರು ಬ್ರಿಟನ್ ಯುವತಿಯನ್ನು ಬೆಂಬಲಿಸಿದ ನಿಲುವನ್ನು ಅಮೆರಿಕಾ ಹುಡುಗಿಯರ ಹೆತ್ತವರು ತೀವ್ರವಾಗಿ ಪ್ರತಿಭಟಿಸಿದರು.
ಆದರೆ ಇದಕ್ಕೆ ತಿರುಗೇಟು ನೀಡಿದ ಪನೇಸರ್, ದ್ರಾಕ್ಷಿ ಹುಳಿಯಾಗಿರುವುದಕ್ಕೆ ಈ ರೀತಿ ಹುಯಿಲೆಬ್ಬಿಸಲಾಗುತ್ತಿದೆ ಎಂದರು.
ನಾನು ಬ್ರಿಟೀಷಳಾಗಿರುವ ಕಾರಣ ನಾನು ಇದನ್ನು ಗೆಲ್ಲಬಾರದಿತ್ತು ಎಂದು ಕೆಲವು ವ್ಯಕ್ತಿಗಳು ಅಭಿಪ್ರಾಯಪಟ್ಟರು. ಆದರೆ ಅವರು ಗೆಲ್ಲಲು ವಿಫಲವಾಗಿರುವುದಕ್ಕೆ ಮಾತ್ರ ಇದನ್ನು ಹೇಳುತ್ತಿದ್ದಾರೆ ಎನ್ನುವುದು ನನ್ನ ಅನಿಸಿಕೆ ಎಂದು ಪನೇಸರ್ ಹೇಳಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ.
13ರ ಹರೆಯದ ಹುಡುಗಿಯರಿಂದ 18ರೊಳಗಿನ ಹುಡುಗಿಯರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಆದರೆ ಅಮೆರಿಕಾದಾದ್ಯಂತದ 30 ಸ್ಪರ್ಧಿಗಳನ್ನು ಹಿಂದಿಕ್ಕುವ ಮೂಲಕ ಪನೇಸರ್ ಹಲವರ ಹುಬ್ಬೇರಿಸಿದರು.
ಮೂಲತಃ ಬ್ರಿಟೀಷ್ ಯುವತಿಯಾಗಿರುವ ಪನೇಸರ್ ಪ್ರಸಕ್ತ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಆಕೆಯ ಹೆತ್ತವರು ಸೇರಿದಂತೆ ಇಡೀ ಕುಟುಂಬವೇ ಅಮೆರಿಕಾಕ್ಕೆ ಸ್ಥಳಾಂತರಗೊಂಡಿದೆ.