ಇಸ್ಲಾಮಾಬಾದ್, ಸೋಮವಾರ, 20 ಸೆಪ್ಟೆಂಬರ್ 2010( 19:59 IST )
ಪರಮಾಣು ಜನಕ ಡಾ.ಅಬ್ದುಲ್ ಖಾದೀರ್ ಖಾನ್ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸುವ ಬಗ್ಗೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರು ಎಲ್ಲಾ ರೀತಿಯಲ್ಲೂ ಆಸಕ್ತಿ ಹೊಂದಿದ್ದರು ಎಂದು ಮಾಜಿ ಪ್ರಧಾನಿ ಮಿರ್ ಜಾಫರ್ ಉಲ್ಲಾ ಖಾನ್ ಜಾಮಾಲಿ ಬಹಿರಂಗಗೊಳಿಸಿದ್ದಾರೆ.
ಖಾನ್ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸುವ ಕುರಿತು ಮುಷ್ ಅವರು ಅಧಿಕಾರದಲ್ಲಿದ್ದಾಗ ಕ್ಯಾಬಿನೆಟ್ ಸಭೆಯನ್ನೂ ಕರೆದಿದ್ದರು. ಆದರೆ ಪಾಕ್ ಸರಕಾರ ಮಾತ್ರ ಖಾನ್ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಿಲ್ಲ ಎಂದು ತಿಳಿಸಿರುವುದಾಗಿ ದಿ ನೇಷನ್ ಪತ್ರಿಕೆ ವರದಿ ಹೇಳಿದೆ.
ಪರಮಾಣು ವಿಜ್ಞಾನಿ ಖಾನ್ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸುವ ಪ್ರಸ್ತಾಪವನ್ನು ಕ್ಯಾಬಿನೆಟ್ ತಿರಸ್ಕರಿಸಿತ್ತು. ಯಾಕೆಂದರೆ ಖಾನ್ ಗೌರವಾನ್ವಿತ ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದು ಜಾಮಾಲಿ ತಿಳಿಸಿದ್ದಾರೆ.
ಖಾನ್ ನಿಷ್ಠಾವಂತ ವ್ಯಕ್ತಿಯಾಗಿದ್ದರು ಎಂಬ ಬಗ್ಗೆ ಮಾಜಿ ಪ್ರಧಾನಿಗಳಿಗೂ ತಿಳಿದಿತ್ತು. ಅವರು ಯಾವತ್ತೂ ಯಾರೊಬ್ಬರಿಗೂ ಮೋಸ ಮಾಡಿಲ್ಲವಾಗಿತ್ತು ಎಂದು ವಿವರಿಸಿದ ಅವರು, ಪರ್ವೆಜ್ ಮುಷರ್ರಫ್ ಅವರು ತಮ್ಮ ದೇಶವನ್ನೇ ಮಾರಲು ಹೊರಟಿದ್ದರು ಎಂದು ಗಂಭೀರವಾಗಿ ಆರೋಪಿಸಿದರು.