ವಾಷಿಂಗ್ಟನ್, ಮಂಗಳವಾರ, 21 ಸೆಪ್ಟೆಂಬರ್ 2010( 15:51 IST )
ಅಮೆರಿಕ, ಚೀನಾದ ನಂತರ ಭಾರತ ಜಗತ್ತಿನ ಮೂರನೇ ಅತ್ಯಂತ ಪ್ರಭಾವಶಾಲಿ ರಾಷ್ಟ್ರ ಎಂಬುದಾಗಿ ಅಮೆರಿಕದ ವರದಿಯೊಂದು ತಿಳಿಸಿದೆ.
ವಿಶ್ವದ ನೂತನ ಪ್ರಭಾವಶಾಲಿ ರಾಷ್ಟ್ರದ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ. ಅಲ್ಲದೇ 2025ರ ವೇಳೆಗೆ ಭಾರತ ಜಾಗತಿಕವಾಗಿ ಮತ್ತಷ್ಟು ಪ್ರಭಾವಶಾಲಿಯಾಗಲಿದೆ ಎಂದು 'ಜಾಗತಿಕ ಆಡಳಿತ 2025' ಸಮೀಕ್ಷೆ ಪ್ರಕಾರ ಅಮೆರಿಕದ ನ್ಯಾಷನಲ್ ಇಂಟೆಲಿಜೆನ್ಸ್ ಕೌನ್ಸಿಲ್ (ಎನ್ಐಸಿ) ಮತ್ತು ಯುರೋಪಿಯನ್ ಯೂನಿಯನ್ಸ್ ಇನ್ಸೂಟ್ಯೂಟ್ ಫಾರ್ ಸೆಕ್ಯೂರಿಟಿ ಸ್ಟಡೀಸ್ (ಇಯುಐಎಸ್ಎಸ್) ಭವಿಷ್ಯ ನುಡಿದಿದೆ.
2010ರ ವರದಿಯಂತೆ ಅಮೆರಿಕ ಜಗತ್ತಿನ ಪ್ರಥಮ ಪ್ರಭಾವಶಾಲಿ ರಾಷ್ಟ್ರವಾಗಿದ್ದು ಶೇ.22ರಷ್ಟು ಜಾಗತಿಕ ಪ್ರಭಾವ ಹೊಂದಿದ್ದರೆ, ಅಮೆರಿಕದ ನಂತರ ಚೀನಾ ಮತ್ತು ಯುರೋಪಿಯನ್ ಒಕ್ಕೂಟ ಇದ್ದು ಶೇ.16ರಷ್ಟು ಹಾಗೂ ಭಾರತ ಶೇ.8ರಷ್ಟು, ನಂತರದ ಸ್ಥಾನವನ್ನು ಜಪಾನ್, ರಷ್ಯಾ, ಬ್ರೆಜಿಲ್ ಕೂಡ ಪಟ್ಟಿಯಲ್ಲಿದ್ದು ಶೇ.5ರಷ್ಟು ಅಂಕ ಪಡೆದಿದೆ.
2025ರವರೆಗೂ ಅಮೆರಿಕ ಅತ್ಯಂತ ಪ್ರಭಾವಶಾಲಿ ರಾಷ್ಟ್ರವಾಗಿ ಮುಂದುವರಿಯಲಿದೆ ಎಂದು ವರದಿ ವಿವರಿಸಿದೆ. ಆದರೆ ಆ ಸಂದರ್ಭದಲ್ಲಿ ಅದರ ಜಾಗತಿಕ ಪ್ರಭಾವ ಶೇ.18ಕ್ಕೆ ಇಳಿಯಲಿದೆ ಎಂದು ತಿಳಿಸಿದೆ. ಆದರೆ ಅಮೆರಿಕವನ್ನು ಹಿಂಬಾಲಿಸುತ್ತಿರುವ ಜಪಾನ್ ಶೇ.16, ಯುರೋಪಿಯನ್ ಒಕ್ಕೂಟ ಶೇ.14 ಹಾಗೂ ಭಾರತ ಶೇ.10ರಷ್ಟು ಪ್ರಭಾವಶಾಲಿಯಾಗಲಿದೆ.