ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಲೇಷಿಯಾದಲ್ಲಿ ಗರ್ಭಿಣಿ ಹುಡುಗಿಯರಿಗೆ ಪ್ರತ್ಯೇಕ ಶಾಲೆ (Malaysian school | pregnant teens | School of Hope | Malacca)
Bookmark and Share Feedback Print
 
ಮಲೇಷಿಯಾದ ಮೊತ್ತ ಮೊದಲ ಅವಿವಾಹಿತ ಗರ್ಭಿಣಿ ಹುಡುಗಿಯರಿಗಾಗಿನ ಶಾಲೆಗೆ ಸೋಮವಾರ ಐವರು ಹುಡುಗಿಯರು ಸೇರುವುದರೊಂದಿಗೆ ಅಧಿಕೃತ ಚಾಲನೆ ದೊರೆತಿದೆ.

ಮಲೇಷಿಯಾದ ಮಲಕ್ಕಾ ರಾಜ್ಯದಲ್ಲಿನ 'ಸ್ಕೂಲ್ ಆಫ್ ಹೋಪ್'ಗೆ ನಾಲ್ಕು ಮಲಯಾ ಹಾಗೂ ಓರ್ವ ಚೀನೀ ಹುಡುಗಿ ಸೇರಿದ್ದು, ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ನಿರ್ಧರಿಸಿದ್ದಾರೆ. ಇವರು ನಾಲ್ಕು ಮತ್ತು ಐದನೇ ತರಗತಿಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಗರ್ಭಿಣಿ ಹುಡುಗಿಯರು ತಮ್ಮ ಹೆತ್ತವರೊಂದಿಗೆ ಮೊದಲು ಮಲಕ್ಕಾ ಇಸ್ಲಾಮಿಕ್ ಧಾರ್ಮಿಕ ಇಲಾಖೆಗೆ ತೆರಳಿ ಅಲ್ಲಿ ಅರ್ಜಿ ಸಲ್ಲಿಸಿದ ನಂತರವಷ್ಟೇ ಶಾಲೆಗೆ ಆಗಮಿಸಬೇಕಾಗಿತ್ತು. ಅದರಂತೆ ಮೊದಲು ಶಾಲೆಗೆ ಬಂದದ್ದು ಚೀನೀ ಹುಡುಗಿ. ಆಕೆ ತನ್ನ ಹೆತ್ತವರ ಜತೆ ಶಾಲೆಯ ವಿದ್ಯಾರ್ಥಿನಿ ನಿಲಯಕ್ಕೆ ಮೊದಲು ಬಂದಿದ್ದಾಳೆ.

ತಮ್ಮ ಐವರು ಗರ್ಭಿಣಿ ಪುತ್ರಿಯರನ್ನು ಈ ಶಾಲೆಯಲ್ಲಿ ದಾಖಲು ಮಾಡಲು ಬಯಸುತ್ತಿರುವುದಾಗಿ ಅವರ ಮನೆಯವರು ಮನವಿ ಮಾಡಿದ್ದಾರೆ ಎಂದು ಭಾನುವಾರವಷ್ಟೇ ಮಲಕ್ಕಾ ಮುಖ್ಯಮಂತ್ರಿ ಮೊಹಮ್ಮದ್ ಆಲಿ ರುಸ್ತುಂ ತಿಳಿಸಿದ್ದರು.

16ರಿಂದ 17ರ ನಡುವಿನ ಈ ಐವರು ಹುಡುಗಿಯರು ಮಲಕ್ಕಾ, ಜೋಹರ್, ನೆಗ್ರಿ ಸೆಂಬಿಲನ್, ಪಹಾಂಗ್ ಮತ್ತು ಕೌಲಾಲಂಪುರಗಳಿಗೆ ಸೇರಿದವರಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಈ ಶಾಲೆಯಲ್ಲಿನ ವಿದ್ಯಾರ್ಥಿನಿಯರ ಸಂಖ್ಯೆ ಶೀಘ್ರದಲ್ಲೇ 40ಕ್ಕೆ ತಲುಪಲಿದೆ. ವಿದ್ಯಾರ್ಥಿನಿಯರ ಹೆಸರು ಮತ್ತಿತರ ವಿಚಾರಗಳನ್ನು ಗೌಪ್ಯವಾಗಿಡಲಾಗುತ್ತದೆ. ಇದನ್ನು ಸಾರ್ವಜನಿಕರು ಮತ್ತು ಮಾಧ್ಯಮಗಳು ಕೂಡ ಗೌರವಿಸಬೇಕು ಎಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದರೂ, ಅವಿವಾಹಿತ ತರುಣಿಯರು ಗರ್ಭಿಣಿಯರಾಗುತ್ತಿರುವುದು ಮತ್ತು ಅಕ್ರಮ ಸಂಬಂಧದಿಂದ ಹುಟ್ಟಿದ ಮಕ್ಕಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂತಹ ಶಾಲೆಯನ್ನು ತೆರೆದಿರುವುದಾಗಿ ಮಲೇಷಿಯಾ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ