ನ್ಯೂಯಾರ್ಕ್, ಬುಧವಾರ, 22 ಸೆಪ್ಟೆಂಬರ್ 2010( 19:47 IST )
ಕಾಶ್ಮೀರ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮುದಾಯ ಮಧ್ಯಸ್ಥಿಕೆ ವಹಿಸಬೇಕೆಂದು,ಮುಖ್ಯವಾಗಿ ಅಮೆರಿಕವನ್ನು ಪಾಕಿಸ್ತಾನ ಸರಕಾರ ಮನವಿ ಮಾಡಿಕೊಂಡಿದೆ.
ಕಾಶ್ಮೀರ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯ ಹಿನ್ನೆಲೆಯಲ್ಲಿ ಈ ವಿವಾದ ಇತ್ಯರ್ಥ ಬಹುಮುಖ್ಯವಾಗಿರುವುದರಿಂದ ಅಮೆರಿಕ ಮಧ್ಯಸ್ಥಿಕೆ ವಹಿಸಬೇಕೆಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ತಿಳಿಸಿದ್ದಾರೆ.
ಬಹುಕಾಲದಿಂದ ವಿವಾದಲ್ಲಿಯೇ ಇರುವ ಕಾಶ್ಮೀರ ಸಮಸ್ಯೆ ಬಗೆಹರಿಸಲು ಅಮೆರಿಕ ಮುಂದಾಳತ್ವ ವಹಿಸಬೇಕೆಂದು ನಾವು ಕರೆ ನೀಡುತ್ತೇವೆ. ಇದರಿಂದಾಗಿ ಮಧ್ಯಾಏಷ್ಯಾದಲ್ಲಿ ಶಾಂತಿ ಪ್ರಕ್ರಿಯೆಗೆ ಅನುವು ಮಾಡಿಕೊಡಬೇಕೆಂದು ಖುರೇಷಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕಾಶ್ಮೀರ ವಿವಾದವನ್ನು ರಾಜಕೀಯವಾಗಿಯೇ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಕಾಶ್ಮೀರ ವಿವಾದ ಇತ್ಯರ್ಥಗೊಳ್ಳುವ ಮೂಲಕ ಈ ಭಾಗದಲ್ಲಿ ಶಾಂತಿ ನೆಲೆಸಲಿದೆ ಎಂದ ಖುರೇಷಿ, ಇಲ್ಲದಿದ್ದಲ್ಲಿ ಪ್ಯಾಲೆಸ್ತೇನ್ ವಿವಾದದಂತೆ ಮುಂದುವರಿದ ಪರಿಣಾಮ ಮೂಲಭೂತವಾದಿಗಳಿಗೆ ಹೆಚ್ಚಿನ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಉದಾಹರಿಸಿದ್ದಾರೆ.