ಇಸ್ಲಾಮಾಬಾದ್, ಗುರುವಾರ, 23 ಸೆಪ್ಟೆಂಬರ್ 2010( 12:55 IST )
ಪಂಜಾಬ್ ಪ್ರಾಂತ್ಯದ ಸರಕಾರ ಜಮಾತ್ ಉದ್ ದವಾ ಸಂಘಟನೆಗೆ ನೆರವು ನೀಡಿ ಬೆಂಬಲಿಸುತ್ತಿರುವುದಾಗಿ ಆಡಳಿತಾರೂಢ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಹಿರಿಯ ನಾಯಕಿಯೊಬ್ಬರು ಗಂಭೀರವಾಗಿ ಆರೋಪಿಸಿದ್ದಾರೆ.
2008ರ ಮುಂಬೈ ದಾಳಿಯ ಸಂಚಿನಲ್ಲಿ ಜೆಯುಡಿ ಕೈವಾಡ ಇರುವ ಬಗ್ಗೆ ಆರೋಪ ಇದ್ದು, ತದನಂತರ ಪಾಕಿಸ್ತಾನ ಸರಕಾರ ಜೆಯುಡಿ ಮೇಲೆ ನಿಷೇಧ ಹೇರಿತ್ತು. ಬಳಿಕ ಅಮೆರಿಕ ಕೂಡ ಜೆಯುಡಿಯನ್ನು ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಿತ್ತು.
ಆದರೆ ನಿಷೇಧಿತ ಜೆಯುಡಿ ಸಂಘಟನೆ ಈಗಲೂ ಪಂಜಾಬ್‌ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪಿಪಿಪಿ ವಕ್ತಾರೆ, ಸಂಸದೆ ಫೌಜಿಯಾ ವಾಹಬ್ ದೂರಿದ್ದು, ಪಂಜಾಬ್ ಸರಕಾರವೇ ಸಂಘಟನೆಗೆ ಬೆಂಬಲ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಪಂಜಾಬ್ ಸರಕಾರ ಜೆಯುಡಿಗೆ ಕೇವಲ ಬೆಂಬಲ ಮಾತ್ರ ನೀಡುತ್ತಿಲ್ಲ, ಎಲ್ಲಾ ರೀತಿಯ ನೆರವು ನೀಡುತ್ತಿರುವುದಾಗಿ ವಾಹಬ್ ಹೇಳಿದ್ದಾರೆ. ಆದರೆ ಪಾಕಿಸ್ತಾನ ಸರಕಾರ ದೇಶಾದ್ಯಂತ ಇರುವ ಜೆಯುಡಿ ಕಚೇರಿಗಳಿಗೆ ಬೀಗಮುದ್ರೆ ಹಾಕಿದೆ. ಜೆಯುಡಿ ಹಾಗೂ ಲಷ್ಕರ್ ಇ ತೊಯ್ಬಾವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ 2008ರಲ್ಲಿ ನಿಷೇಧ ಹೇರಿದ ನಂತರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿತ್ತು.
ಪಂಜಾಬ್ ಸರಕಾರ ಜೆಯುಡಿಗೆ 82 ಮಿಲಿಯನ್ ಆರ್ಥಿಕ ನೆರವು ನೀಡಿರುವುದು ಕೂಡ ಅಧಿಕೃತ ದಾಖಲೆಯಿಂದ ಬಹಿರಂಗಗೊಂಡಿದೆ. ಇದರಿಂದಾಗಿ ಪಂಜಾಬ್ ಸರಕಾರ ಜೆಯುಡಿಯನ್ನು ಪೂರ್ಣಪ್ರಮಾಣದಲ್ಲಿ ಬೆಂಬಲಿಸುತ್ತಿದೆ ಎಂದು ವಾಹಬ್ ಆರೋಪಿಸಿದ್ದಾರೆ.