ಸೌಂದರ್ಯ ರಾಣಿ ಪಟ್ಟ ಗಿಟ್ಟಿಸಿಕೊಂಡಿದ್ದ ಚೆಲುವೆಯೊಬ್ಬಳು ಮಸಾಜ್ ಪಾರ್ಲರ್ವೊಂದರಲ್ಲಿ ಲೈಂಗಿಕ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆಂಬ ಆರೋಪದ ಹಿನ್ನೆಲೆಯಲ್ಲಿ ಮಿಸ್ ಗ್ರೇಟ್ ಬ್ರಿಟನ್ ಸ್ಪರ್ಧೆಯಿಂದ ಹೊರಬೀಳುವಂತಾಗಿರುವ ಘಟನೆಯೊಂದು ಬಹಿರಂಗಗೊಂಡಿದೆ.
ಲೌರಾ ಅನ್ನೆಸ್ಸ್ (27) ಎಂಬ ಚೆಲುವೆ ಇತ್ತೀಚೆಗಷ್ಟೇ ಮಿಸ್ ಪ್ಲೇಮೌತ್ ಸಿಟಿ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಳು. ಅಷ್ಟೇ ಅಲ್ಲ ನವೆಂಬರ್ ತಿಂಗಳಿನಲ್ಲಿ ನ್ಯಾಷನಲ್ ಬ್ಯೂಟಿ ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಿ ನಡೆಸಿದ್ದಳು. ಆದರೆ ಲೌರಾ ಅರೆನಗ್ನ ಭಂಗಿಯಲ್ಲಿ ರೂಪದರ್ಶಿಯಾಗಿ ಹಾಗೂ ವೇಶ್ಯಾವಾಟಿಕೆ ನಡೆಸುತ್ತಿರುವ ಅಂಶ ಬಹಿರಂಗಗೊಳ್ಳುವ ಮೂಲಕ ಸ್ಪರ್ಧೆಯಿಂದ ಹೊರಬೀಳುವಂತಾಗಿದೆ.
ಅನ್ನೆಸ್ 1999ರಲ್ಲಿ ತನ್ನ ಕಿರಿಯ ವಯಸ್ಸಿನಲ್ಲಿಯೇ ಮಸಾಜ್ ಪಾರ್ಲರ್ನಲ್ಲಿ ಸೆಕ್ಸ್ ವರ್ಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಳೆಂಬ ಮಾಹಿತಿ ಸೌಂದರ್ಯ ಸ್ಪರ್ಧೆ ನಡೆಸುತ್ತಿರುವ ಸಂಘಟಿಕರ ಗಮನಕ್ಕೆ ಬಂದಿರಲಿಲ್ಲವಾಗಿತ್ತು ಎಂದು ಸನ್ ಪತ್ರಿಕೆ ವರದಿ ತಿಳಿಸಿದೆ. ಆದರೆ ಇದೀಗ ಆಕೆಯ ವೇಶ್ಯಾವಾಟಿಕೆ ವೃತ್ತಿಯ ವಿಷಯ ಸಂಘಟಕರ ಗಮನಕ್ಕೆ ಬಂದಿದ್ದರಿಂದ ಸ್ಪರ್ಧೆಯಿಂದ ಹೊರಗಿಟ್ಟಿದ್ದಾರೆ.
ಮಿಸ್ ಗ್ರೇಟ್ ಬ್ರಿಟನ್ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಯಾವತ್ತೂ ಅರೆನಗ್ನ ಭಂಗಿಯಲ್ಲಾಗಲಿ ಅಥವಾ ವೇಶ್ಯಾವಾಟಿಕೆಯಲ್ಲಿ ಪಾಲ್ಗೊಂಡಿರಬಾರದು ಎಂಬ ಷರತ್ತು ವಿಧಿಸಿದೆ. ಒಟ್ಟಾರೆ ಲೌರಾ ಕಾರ್ಯವೈಖರಿ ತಮಗೆ ಆಘಾತ ನೀಡಿದೆ ಎಂದು ಮಿಸ್ ಗ್ರೇಟ್ ಬ್ರಿಟನ್ ಸಂಘಟಕರಾದ ಲಿಜ್ ಫುಲ್ಲೆರ್ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಪತ್ರಿಕೆ ತಿಳಿಸಿದೆ.
ಸೌಂದರ್ಯ ರಾಣಿಯಾಗಲು ಸುಳ್ಳು ಹೇಳಿದ ಕಳ್ಳಿ: ಲೌರಾ ಅನ್ನೆಸ್ಸ್ 2010ರಲ್ಲಿ ಮಿಸ್ ಕಾರ್ನ್ವಾಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಳು. ಆದರೆ ಲೌರಾ ಸ್ಪರ್ಧೆಯ ಸಂದರ್ಭದಲ್ಲಿ ತನ್ನ ವಯಸ್ಸಿನ ಬಗ್ಗೆ ಸುಳ್ಳು ಮಾಹಿತಿ ನೀಡಿರುವ ಆರೋಪದಲ್ಲಿ ಬ್ಯೂಟಿ ಕ್ವೀನ್ ಕಿರೀಟವನ್ನು ವಾಪಸ್ ಪಡೆಯಲಾಗಿತ್ತು.
ಮಿಸ್ ಕಾರ್ನ್ವಾಲ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು 22ರಿಂದ 24 ವರ್ಷದವರಾಗಿರಬೇಕೆಂಬ ನಿಯಮ ವಿಧಿಸಲಾಗಿತ್ತು. ಆದರೆ ಲೌರಾ 27 ವರ್ಷದವಳಾಗಿದ್ದು, ತನ್ನ ವಯಸ್ಸು 22 ಎಂದು ಸುಳ್ಳು ಪ್ರಮಾಣ ಪತ್ರ ನೀಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಳು. ಅಷ್ಟೇ ಅಲ್ಲ ಸ್ಪರ್ಧಾಳು ದೇಶದ ನಿವಾಸಿ ಆಗಿರಬೇಕು, ದೇಶದಲ್ಲಿ ವಿದ್ಯಾಭ್ಯಾಸ ಪಡೆದಿರಬೇಕೆಂಬ ಷರತ್ತನ್ನೂ ಹಾಕಿತ್ತು. ಲೌರಾ ಈ ಎಲ್ಲಾ ಅಂಶಗಳ ಬಗ್ಗೆ ಸುಳ್ಳು ಮಾಹಿತಿ ನೀಡಿ ಕೊನೆಗೂ ಸಿಕ್ಕಿ ಬಿದ್ದು ಮರ್ಯಾದೆ ಕಳೆದುಕೊಂಡಿದ್ದಳು.
ತನ್ನ ವಯಸ್ಸಿನ ಬಗ್ಗೆ ಸುಳ್ಳು ಮಾಹಿತಿ ನೀಡಿ ಲೌರಾ 2006, 2007, 2008 ಹಾಗೂ 2010ರಲ್ಲಿ ಕಾರ್ನ್ವಾಲ್ ಮಿಸ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದಳು. ತನಗೆ ಸೌಂದರ್ಯ ರಾಣಿಯಾಗಬೇಕೆಂಬ ಕನಸು ಇದ್ದಿದ್ದರಿಂದ ಆ ರೀತಿ ಮಾಡಿರುವುದಾಗಿ ಈ ಬಗ್ಗೆ ಲೌರಾ ಪ್ರತಿಕ್ರಿಯೆ ನೀಡಿದ್ದಳು.