ತಾಲಿಬಾನ್ ಉಗ್ರರ ಬೆದರಿಕೆಯ ನಡುವೆಯೂ ಕಳೆದ ವಾರ ನಡೆದ ಅಫ್ಘಾನಿಸ್ತಾನದ ಸಂಸತ್ ಚುನಾವಣೆಯ ಭಾಗಶಃ ಫಲಿತಾಂಶವನ್ನು ಗುರುವಾರ ಘೋಷಿಸಲು ಚುನಾವಣಾ ಅಧಿಕಾರಿಗಳು ನಿರ್ಧರಿಸಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
ಕಳೆದ ವರ್ಷ ಅಫ್ಘಾನಿಸ್ತಾನ ಅಧ್ಯಕ್ಷೀಯ ಚುನಾವಣೆ ನಡೆದ ನಂತರ ಶನಿವಾರ ಮೊದಲ ಬಾರಿಗೆ ಸಂಸತ್ ಚುನಾವಣೆ ನಡೆಸಲಾಗಿತ್ತು. ಅಧ್ಯಕ್ಷೀಯ ಚುನಾವಣೆಯಲ್ಲಿ ಹಮೀದ್ ಕರ್ಜಾಯ್ ಆಯ್ಕೆಯಾಗಿದ್ದರು. ಆದರೆ ಚುನಾವಣೆಯಲ್ಲಿ ಸಾಕಷ್ಟು ಅಕ್ರಮ ನಡೆಸಲಾಗಿತ್ತು ಎಂಬ ಬಲವಾದ ಆರೋಪ ಕೂಡ ಕೇಳಿಬಂದಿತ್ತು.
ಇದೀಗ ಅಧ್ಯಕ್ಷ ಹಮೀದ್ ಕರ್ಜಾಯ್‌ಗೆ ಸವಾಲಾಗಿದ್ದ 249 ಸಂಸದರ ಆಯ್ಕೆಗಾಗಿ ನಡೆದ ಚುನಾವಣೆಯ ಭಾಗಶಃ ಫಲಿತಾಂಶವನ್ನು ಗುರುವಾರ ಘೋಷಿಸಲು ನಿರ್ಧರಿಸಿರುವುದಾಗಿ ಚುನಾವಣಾ ಆಯೋಗದ ವಕ್ತಾರ ನೂರ್ ಮೊಹಮ್ಮದ್ ನೂರ್ ತಿಳಿಸಿದ್ದಾರೆ.
ಪ್ರಾಥಮಿಕವಾಗಿ ಪೂರ್ಣ ಫಲಿತಾಂಶವನ್ನು ಅಕ್ಟೋಬರ್ ಮೊದಲ ವಾರದಲ್ಲಿ ಘೋಷಿಸಲಾಗುವುದು. ಆದರೆ ಒಟ್ಟು ಫಲಿತಾಂಶವನ್ನು ಅಕ್ಟೋಬರ್ ಅಂತ್ಯದ ವೇಳೆಗಷ್ಟೇ ಬಹಿರಂಗಪಡಿಸಲಾಗುವುದು ಎಂದು ನೂರ್ ವಿವರಿಸಿದ್ದಾರೆ. ಕಳೆದ ವಾರ ನಡೆದ ಸಂಸತ್ ಚುನಾವಣೆಯಲ್ಲಿ 2,500 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ತಾಲಿಬಾನ್ ಉಗ್ರರ ಬೆದರಿಕೆಯ ನಡುವೆಯೂ ಬಿಗಿ ಭದ್ರತೆಯಲ್ಲಿ ಚುನಾವಣೆ ನಡೆಸಲಾಗಿತ್ತು. ಚುನಾವಣೆಯ ದಿನದಂದು ಉಗ್ರರು ಮತಗಟ್ಟೆ ಮೇಲೆ ಬಾಂಬ್, ರಾಕೆಟ್ ದಾಳಿ ನಡೆಸಿದ್ದರು. ಘಟನೆಯಲ್ಲಿ 21 ನಾಗರಿಕರು, ಒಂಬತ್ತು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದರು.