ಅಮೆರಿಕದ ವರ್ಜಿನಿಯಾದಲ್ಲಿ ಸುಮಾರು 93 ವರ್ಷಗಳ ನಂತರ ಮೊದಲ ಬಾರಿಗೆ ಮಹಿಳಾ ಅಪರಾಧಿಗೆ ಮರಣದಂಡನೆಯನ್ನು ಜಾರಿಗೊಳಿಸಲಾಗಿದೆ.
41 ವರ್ಷ ವಯಸ್ಸಿನ ತೆರೆಸಾ ಲೆವಿಸ್ ಎನ್ನುವ ಮಹಿಳೆ 250,000 ಡಾಲರ್ ವಿಮೆ ಹಣವನ್ನು ಪಡೆಯಲು ಪತಿ ಮತ್ತು ಮಲಮಗನನ್ನು ಹತ್ಯೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದರು.
ವರ್ಜಿನಿಯಾದ ಜರಾಟ್‌ನಲ್ಲಿರುವ ಗ್ರೀನ್ಸ್‌ವಿಲ್ಲಾ ಕರೆಕ್ಷನಲ್ ಸೆಂಟರ್‌ನಲ್ಲಿ ತೆರೆಸಾ ಲೆವಿಸ್‌ಗೆ ಗುರುವಾರದಂದು ರಾತ್ರಿ 9.13 ಗಂಟೆಗೆ ವಿಷದ ಇಂಜೆಕ್ಷನ್ ನೀಡಲಾಯಿತು. ಈ ಸಂದರ್ಭದಲ್ಲಿ ಮೃತಳ ಬೆಂಬಲಿಗರು, ಸಂಬಂಧಿಕರು ಉಪಸ್ಥಿತರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೆವಿಸ್, ಇಬ್ಬರು ಪುರುಷರಿಗೆ ಲೈಂಗಿಕ, ನಗದು ಹಣ ಮತ್ತು ವಿಮೆಯಲ್ಲಿ ದೊರೆಯುವ ಮೊತ್ತದಲ್ಲಿ ಭಾಗವನ್ನು ನೀಡುವ ಅಮಿಷವೊಡ್ಡಿ, ಪತಿ ಮತ್ತು ಮಲಮಗನನ್ನು ಹತ್ಯೆ ಮಾಡುವಂತೆ ಪ್ರಚೋದಿಸಿದಳು. ಪತಿ ಜ್ಯೂಲಿಯನ್ ಕ್ಲಿಫ್ಟೊನ್ ಲೆವಿಸ್ ಮತ್ತು ಮಲಮಗ ಚಾರ್ಲ್ಸ್ ನಿದ್ರಿಸುತ್ತಿರುವಾಗ ಆರೋಪಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.