ಪಾಕಿಸ್ತಾನದಲ್ಲಿ ಸರಕಾರ ಬದಲಾವಣೆಯಾಗುವ ಉಹಾಪೋಹ ವರದಿಗಳ ಮಧ್ಯೆ, ಮಾಜಿ ಪ್ರಧಾನಿ ಹಾಗೂ ಪಿಎಂಎಲ್-ಎನ್ ಪಕ್ಷದ ಮುಖ್ಯಸ್ಥ ನವಾಜ್ ಷರೀಫ್, ತಮ್ಮ ಪಕ್ಷ ಯಾವುದೇ ಸರ್ವಾಧಿಕಾರಿಯನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎರಡು ಬಾರಿ ಪ್ರಧಾನಿ ಸ್ಥಾನವನ್ನು ಅಲಂಕರಿಸಿದ್ದ ಷರೀಫ್, ವಿದೇಶದಲ್ಲಿ ನೆಲೆಸಿರುವ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷ್ರಫ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.
ಸರಕಾರವನ್ನು ಬದಲಿಸಲು ಯಾವುದೇ ಸರ್ವಾಧಿಕಾರಿಯನ್ನು ಬೆಂಬಲಿಸುವುದಿಲ್ಲ ಮತ್ತು ಸರಕಾರ ರಚನೆಗಾಗಿ ಕುದರೆ ವ್ಯಾಪಾರದಲ್ಲಿ ತೊಡಗುವುದಿಲ್ಲ ಎನ್ನುವುದನ್ನು ದೇಶದ ಜನತೆಗೆ ಸ್ಪಷ್ಟಪಡಿಸ ಬಯಸುತ್ತೇನೆ ಎಂದು ಹೇಳಿದ್ದಾರೆ.
ಅದೇ ಸಮಯದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುವುದನ್ನು ತಮ್ಮ ಪಕ್ಷ ಸಹಿಸುವುದಿಲ್ಲ ಎನ್ನುವುದು ಸರಕಾರದ ಗಮನಕ್ಕೆ ತರಲು ಬಯಸುತ್ತೇನೆ ಎಂದು ಷರೀಫ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನೇತೃತ್ವದ ಸರಕಾರ, ದೇಶದ ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಪಾಲಿಸಬೇಕು. ನಾವು ಸರ್ವೋಚ್ಚ ನ್ಯಾಯಾಲಯದ ಪರವಾಗಿದ್ದೇವೆ. ಸರಕಾರದ ಪರವಾಗಿಲ್ಲ ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.