ಇಸ್ಲಾಮಾಬಾದ್, ಶನಿವಾರ, 25 ಸೆಪ್ಟೆಂಬರ್ 2010( 13:35 IST )
ಸುಪ್ರೀಂಕೋರ್ಟ್ ತರಾಟೆಯ ನಡುವೆಯೂ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ವಿರುದ್ಧದ ಸ್ವಿರ್ಟ್ಜರ್‌ಲ್ಯಾಂಡ್‌ನಲ್ಲಿನ ಭ್ರಷ್ಟಾಚಾರ ಪ್ರಕರಣದ ಮರು ತನಿಖೆಯನ್ನು ಮತ್ತೆ ಆರಂಭಿಸುವುದಿಲ್ಲ ಎಂಬ ನಿರ್ಧಾರವನ್ನು ಪಾಕ್ ಸರಕಾರ ಸಮರ್ಥಿಸಿಕೊಂಡಿರುವುದಾಗಿ ಟಿವಿ ಚಾನೆಲ್‌ವೊಂದರ ವರದಿ ತಿಳಿಸಿದೆ.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ನಿಲುವಿನ ಬಗೆಗಿನ ಸಾರಾಂಶವನ್ನು ಕಾನೂನು ಸಚಿವಾಲಯ ಪ್ರಧಾನಿಗೆ ರವಾನಿಸಿರುವುದಾಗಿ ಮೂಲವೊಂದು ತಿಳಿಸಿರುವುದಾಗಿ ವರದಿಯಲ್ಲಿ ವಿವರಿಸಿದೆ.
ಸ್ವಿರ್ಟ್ಜರ್‌ಲ್ಯಾಂಡ್‌ನಲ್ಲಿನ ಭ್ರಷ್ಟಾಚಾರ ಪ್ರಕರಣ ಮುಗಿದ ಅಧ್ಯಾಯವಾಗಿದ್ದು, ಆ ಪ್ರಕರಣನ್ನು ಮತ್ತೆ ಮರು ತನಿಖೆ ಮಾಡಬೇಕಾದ ಅಗತ್ಯವಿಲ್ಲ ಎಂಬುದಾಗಿ ಸಾರಾಂಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದೆ. ಅಷ್ಟೇ ಅಲ್ಲ ದೇಶದ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಸಂವಿಧಾನ ಕೂಡ ಮಾನ್ಯ ಮಾಡುವುದಿಲ್ಲ ಎಂದು ಸರಕಾರ ಸ್ಪಷ್ಟವಾಗಿ ವಿವರಿಸಿದೆ ಎಂದು ವರದಿ ತಿಳಿಸಿದೆ.
ಪಾಕಿಸ್ತಾನ ಅಧ್ಯಕ್ಷ ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಮರು ತನಿಖೆ ಆರಂಭಿಸಿದರೆ ಇದರಿಂದ ದೇಶದ ಸ್ಥಿರತೆಗೆ ಧಕ್ಕೆ ಉಂಟಾಗಲಿದೆ ಎಂದು ಕಾನೂನು ಸಚಿವಾಲಯ ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಿದೆ.
ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಯ ಭ್ರಷ್ಟಾಚಾರ ಪ್ರಕರಣದ ಮರು ತನಿಖೆಗೆ ಮೀನಮೇಷ ಎಣಿಸುತ್ತಿರುವ ಪಾಕ್ ಸರಕಾರದ ಕ್ರಮವನ್ನು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ, ಪ್ರಕರಣದ ಮರು ತನಿಖೆ ಬಗ್ಗೆ ಸರಕಾರದ ನಿಲುವು ಏನು ಎಂಬುದನ್ನು ಸೆ.24ರೊಳಗೆ ಸ್ಪಷ್ಟಪಡಿಸುವಂತೆ ತಾಕೀತು ಮಾಡಿತ್ತು. ಇಷ್ಟೆಲ್ಲಾ ಛೀಮಾರಿ ಹಾಕಿಸಿಕೊಂಡಿದ್ದರೂ ಕೂಡ ಪಾಕ್ ಸರಕಾರ ಜರ್ದಾರಿ ಭ್ರಷ್ಟಾಚಾರ ಪ್ರಕರಣ ಮರು ತನಿಖೆ ಮಾಡಲ್ಲ ಎಂದು ತಿಳಿಸಿದೆ.